ಸಾಧನೆಯ ಬಗ್ಗೆ ತುತ್ತೂರಿ ಊದುವುದು ನನ್ನ ಜಾಯಮಾನ ಅಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-06-16 13:36 GMT

ಬೆಂಗಳೂರು, ಜೂ. 16: ‘ಸಾಧನೆಯ ಬಗ್ಗೆ ತುತ್ತೂರಿ ಊದುವುದು ನನ್ನ ಜಾಯಮಾನ ಅಲ್ಲ. ಶಾಸಕನಾಗಿ ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆ’ ಎಂದು ‘ಬಾದಾಮಿ ಕ್ಷೇತ್ರಕ್ಕೆ ಅತಿರ್ಥಿ ಶಾಸಕರಾಗಬೇಡಿ’ ಎಂದು ಟ್ವಿಟ್ಟರ್ ಮೂಲಕ ಕಾಲೆಳೆದ ಯುವಕನಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

‘ನನ್ನ ಕಾರ್ಯಗಳ ಬಗ್ಗೆ ಬಾದಾಮಿ ಕ್ಷೇತ್ರದ ಮತದಾರರಿಗೆ ತಿಳಿದಿದೆ. ಈ ಬಗ್ಗೆ ರಾಜಕೀಯ ವಾಗ್ವಾದ ಮಾಡುವುದರಲ್ಲಿ ನನಗೆ ಆಸಕ್ತಿ ಇಲ್ಲ. ಒಂದು ವರ್ಷದಲ್ಲಿ ಬಾದಾಮಿ ಕ್ಷೇತ್ರ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಯೋಜನೆಗಳನ್ನು ಕಂಡಿದೆ. ನೀರಾವರಿ, ರಸ್ತೆ, ಪ್ರವಾಸೋದ್ಯಮ, ಮೂಲಸೌಲಭ್ಯ ಅಭಿವೃದ್ಧಿ ಹೀಗೆ ಹಲವು ಕ್ಷೇತ್ರಗಳಲ್ಲಿ ಒಂದೇ ವರ್ಷದ ಅವಧಿಯಲ್ಲಿ 1,300 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಕಾಮಗಾರಿ ನಡೆಯುತ್ತಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

‘ನಾನು ಬಾದಾಮಿ ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ನಂತರದಲ್ಲಿ ಒಂದು ವರ್ಷದಿಂದ ಸುಮಾರು 50ಕ್ಕೂ ಹೆಚ್ಚು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿ ಜನರ ಕುಂದು ಕೊರತೆಗಳನ್ನು ಆಲಿಸಿದ್ದೇನೆ. ಕ್ಷೇತ್ರದ ಜನರ ಜತೆಗಿನ ಸಂಪರ್ಕವನ್ನು ನಿರಂತರವಾಗಿ ಕಾಯ್ದುಕೊಳ್ಳಲು ಬಾದಾಮಿ ಪಟ್ಟಣದಲ್ಲಿ ಗೃಹ ಕಚೇರಿಯನ್ನು ಆರಂಭಿಸಿದ್ದೇನೆ’ ಎಂದು ಸಿದ್ದರಾಮಯ್ಯ ಸರಣಿ ಟ್ವೀಟ್ ಮೂಲಕ ಉತ್ತರ ವಿರೋಧಿಗಳಿಗೆ ನೀಡಿದ್ದಾರೆ.

ಯುವಕನ ಟ್ವೀಟ್: ‘ಬಾದಾಮಿ ಕ್ಷೇತ್ರದ ಶಾಸಕರಾಗಿ ವರ್ಷ ಕಳೆದರೂ ಈವರೆಗೂ ಒಂದೆ ಒಂದು ಕೆಡಿಪಿ ಸಭೆಗೂ ಬಂದಿಲ್ಲ. ಜಿಲ್ಲೆಯಲ್ಲಿ ವಿಪಕ್ಷ ನಾಯಕರು, ಆಡಳಿತ ಪಕ್ಷದ ಸಚಿವರು ಹಾಗೂ ಕೇಂದ್ರದ ಬರ ಅಧ್ಯಯನ ತಂಡ ಬಂದರೂ ಒಮ್ಮೆಯೂ ಕ್ಷೇತ್ರದ ಶಾಸಕರಾಗಿ ಸಿದ್ದರಾಮಯ್ಯನವರ ಉಪಸ್ಥಿತಿಯೂ ಇಲ್ಲ. ಈಗಲಾದರೂ ಶಾಸಕರೇ ಕ್ಷೇತ್ರಕ್ಕೆ ಬನ್ನಿ’ ಎಂದು ಯುವಕ ಟ್ವೀಟ್ ಮಾಡಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News