ಬಳ್ಳಾರಿಯಿಂದಲೇ ‘ಆಪರೇಷನ್ ಕಮಲ’ ಆರಂಭವಾಗುತ್ತದೆ ಎಂದ ಬಿಜೆಪಿ ಮುಖಂಡ ಈಶ್ವರಪ್ಪ

Update: 2019-06-16 13:48 GMT

ಬಳ್ಳಾರಿ, ಜೂ. 16: ‘ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಅತೃಪ್ತಿ ಇದೆ. ಹೀಗಾಗಿ ಆಪರೇಷನ್ ಕಮಲ ಬಳ್ಳಾರಿಯಿಂದಲೇ ಆರಂಭವಾಗುತ್ತದೆ ಎಂದು ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಆಪರೇಷನ್ ಕಮಲದ ಸುಳಿವು ನೀಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರಲ್ಲಿ ಅತೃಪ್ತಿ ಮಡುಗಟ್ಟಿದ್ದು, ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮೂಲ ಕಾಂಗ್ರೆಸಿಗರ ಕಡೆಗಣನೆ ಸರಿಯಲ್ಲ ಎಂದು ಇದೇ ವೇಳೆ ತಿಳಿಸಿದರು.

ಮುಖ್ಯಮಂತ್ರಿಗಳೇ ನಾನು ಎಷ್ಟು ದಿನ ಇರ್ತೀನೋ ಗೊತ್ತಿಲ್ಲ ಎಂದು ಲೂಟಿಗೆ ಇಳಿದಿದ್ದಾರೆ. ಒಳ್ಳೆಯ ಆಡಳಿತ ನೀಡಲು ಇವರಿಂದ ಸಾಧ್ಯವಿಲ್ಲ ಎಂದು ಟೀಕಿಸಿದ ಅವರು, ನಿಮ್ಮ ಶಾಸಕರನ್ನು ನೀವು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಬಿಜೆಪಿಯನ್ನು ದೂರಬೇಡಿ ಎಂದು ಲೇವಡಿ ಮಾಡಿದರು.

ಬಳ್ಳಾರಿಯ ಜಿಂದಾಲ್ ಕಂಪೆನಿಗೆ ಭೂಮಿ ಹಸ್ತಾಂತರ ವಿಚಾರದಲ್ಲಿ ಹಿರಿಯ ರಾಜಕಾರಣಿಗಳು ಭಾಗಿಯಾಗಿದ್ದು, ಇದಕ್ಕೆ ಕಾಂಗ್ರೆಸ್ ಪಕ್ಷದ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಆಸ್ತಿ ರಕ್ಷಣೆಗೆ ಬಿಜೆಪಿ ಸಿದ್ಧ. ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದ ಸಿದ್ದರಾಮಯ್ಯನವರು ಈಗ ಏಲ್ಲಿ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ಸತ್ಯ ಹೇಳಲು ಸಿದ್ದರಿಲ್ಲ. ಆದರೆ, ಸಚಿವ ಡಿ.ಕೆ.ಶಿವಕುಮಾರ್ ಅವರು ಜಿಂದಾಲ್ ಪರ ವಾದ ಮಾಡುತ್ತಿದ್ದಾರೆ. ಇದನ್ನೆಲ್ಲ ಸಹಿಸಿಕೊಂಡಿದ್ದರೆ ಇವರೆಲ್ಲ ಒಂದು ದಿನ ರಾಜ್ಯವನ್ನೇ ಮಾರಾಟ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಜಿಂದಾಲ್ ಕಂಪೆನಿಗೆ ಭೂಮಿ ಹಸ್ತಾಂತರ ಮತ್ತು ಐಎಂಎ ವಂಚನೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಈ ಬಗ್ಗೆ ಸಿದ್ದರಾಮಯ್ಯ ಮತ್ತು ಸಿಎಂ ಕುಮಾರಸ್ವಾಮಿ ಮೌನ ಮುರಿದು ಮಾತನಾಡಬೇಕು. ಜಿಂದಾಲ್‌ಗೆ ನೀಡಲು ಮುಂದಾಗಿರುವ ಭೂಮಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News