'ಜಿಂದಾಲ್‌ಗೆ ಭೂಮಿ' ವಿಚಾರದಲ್ಲಿ ಬಿಜೆಪಿ ರಾಜಕೀಯ ಸಲ್ಲ: ಸತೀಶ್ ಜಾರಕಿಹೊಳಿ ಆಕ್ಷೇಪ

Update: 2019-06-16 14:46 GMT

ಬೆಳಗಾವಿ, ಜೂ. 16: ಬಳ್ಳಾರಿ ಜಿಂದಾಲ್ ಕಂಪೆನಿಗೆ ಬಿಜೆಪಿ ಅವಧಿಯಲ್ಲೆ ಜಮೀನು ನೀಡಿದ್ದು ಇದೀಗ ಆ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಇಂದಿಲ್ಲಿ ಆಕ್ಷೇಪಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಂದಾಲ್‌ಗೆ ಯಾರ ಅವಧಿಯಲ್ಲಿ ಭೂಮಿ ನೀಡಲಾಗಿದೆ ಎಂಬ ಬಗ್ಗೆ ಬಿಜೆಪಿ ಹಾಗೂ ಮೈತ್ರಿ ಪ್ರತಿನಿಧಿಗಳನ್ನು ಕೂರಿಸಿ ಸಾರ್ವಜನಿಕ ಚರ್ಚೆ ನಡೆಸಿದರೆ ಸತ್ಯಾಂಶ ಬೆಳಕಿಗೆ ಬರಲಿದೆ ಎಂದರು.

ಮನ್ಸೂರ್ ಬಂಧನ ದೊಡ್ಡ ವಿಚಾರವಲ್ಲ: ಐಎಂಎ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಬಂಧನ ದೊಡ್ಡ ವಿಚಾರವಲ್ಲ. ಕೂಡಲೇ ಆರೋಪಿಯನ್ನು ಬಂಧಿಸಲಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಇಂದಿಲ್ಲಿ ಹೇಳಿದರು.

ಆರೋಪಿಯನ್ನು ಝಮೀರ್ ಅಹ್ಮದ್ ಖಾನ್ ತಮ್ಮ ಮನೆಯಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ. ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಸರಕಾರ ಗಂಭೀರ ಕ್ರಮ ಕೈಗೊಳ್ಳಬೇಕು. ಹೂಡಿಕೆದಾರರಿಗೆ ಹಣ ಹಿಂದಿರುಗಿಸಲು ಆಸ್ಥೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಪ್ರಕರಣವನ್ನು ಸಿಟ್ ತನಿಖೆಗೆ ವಹಿಸಿದ್ದು, ತನಿಖೆ ಪ್ರಗತಿಯಲ್ಲಿದೆ. ಆರೋಪಿಯನ್ನು ಪೊಲೀಸರು ಪತ್ತೆ ಮಾಡಲಿದ್ದಾರೆ. ಈ ಮಧ್ಯೆ ಸಚಿವ ಝಮೀರ್ ಮೇಲೆ ಆರೋಪ ಮಾಡಲಾಗುತ್ತಿದ್ದು ಈ ಬಗ್ಗೆ ಯಾವುದೇ ದಾಖಲೆ ಇಲ್ಲ. ಹೀಗಿರುವಾಗ ಅವರ ರಾಜೀನಾಮೆ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.

‘ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿಯಿಂದ ಸರಕಾರಕ್ಕೆ ತೊಂದರೆ ಇಲ್ಲ. ಸರಕಾರಕ್ಕೆ ಸಂಖ್ಯಾಬಲವಿದೆ. ಆದರೆ, ಕೆಲವರ ಅಸಮಾಧಾನದಿಂದ ತೊಂದರೆ ಆಗುತ್ತಿದೆ. ಈ ಬಗ್ಗೆ ಮೈತ್ರಿ ಮುಖಂಡರು ಎಲ್ಲವನ್ನು ನೋಡಿಕೊಳ್ಳಲಿದ್ದಾರೆ’

-ಸತೀಶ್ ಜಾರಕಿಹೊಳಿ, ಅರಣ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News