ದಲಿತ ಯುವಕನ ಬೆತ್ತಲೆ ಮೆರವಣಿಗೆ ಖಂಡಿಸಿ ಜೂ.18 ಕ್ಕೆ ಕಾಲ್ನಡಿಗೆ ಜಾಥ

Update: 2019-06-16 17:19 GMT

ಚಾಮರಾಜನಗರ, ಜೂ.16: ಜಿಲ್ಲೆಯ ಗುಂಡ್ಲುಪೇಟೆ ಹೊರವಲಯದ ದೇವಾಲಯದಲ್ಲಿ ನಡೆದ ದಲಿತ ಯುವಕನ ಬೆತ್ತಲೆ ಮೆರವಣಿಗೆ ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಜೂನ್ 18ರಂದು ಕಾಲ್ನಡಿಗೆ ಜಾಥಾ ಹಾಗೂ ಬೌದ್ದ ಧರ್ಮ ಸ್ವೀಕಾರ ಕಾರ್ಯಕ್ರಮ ನಡೆಸಲು ಉದ್ದೇಶಿಸಿವೆ. 

ಮಂಗಳವಾರ ಬೆಳಗ್ಗೆ 10 ಗಂಟೆಗೆ ಶನೀಶ್ವರ ದೇವಸ್ಥಾನದಿಂದ ಮೌನ ಮೆರವಣಿಗೆ ಮೂಲಕ ಸಾಗುವ ಪ್ರತಿಭಟನಾಕಾರರು ಪುರಸಭೆಯ ಕಲಾಮಂದಿರದಲ್ಲಿ ಸಮಾವೇಶಗೊಳ್ಳುವರು. ಈ ಸಂದರ್ಭದಲ್ಲಿ ಸಾಮೂಹಿಕ ಬೌದ್ದಧರ್ಮ ಸ್ವೀಕಾರ ಮಾಡಲಾಗುವುದು ಎಂದು ಮುಖಂಡರು ಹೇಳಿದ್ದಾರೆ. ಈ ಬಗ್ಗೆ ಎಲ್ಲೆಡೆಯೂ ಕರಪತ್ರಗಳನ್ನು ಹಂಚಲಾಗುತ್ತಿವೆ. ಆದರೆ ಪೊಲೀಸರು ನಾವು ಯಾವುದೇ ಮೆರವಣಿಗೆ ನಡೆಸಲು ಅನುಮತಿ ನೀಡಿಲ್ಲ ಎಂದಿದ್ದಾರೆ. 

ಪ್ರತಿ ಮೆರವಣಿಗೆ ಬಗ್ಗೆ ಚಿಂತನೆ: ಶಿಂಡನಪುರ ಎಸ್.ಟಿ.ಮಹದೇವಸ್ವಾಮಿ ಮಾತನಾಡಿ, ಯಾವುದೇ ಜಾತಿ ವರ್ಗಗಳ ಬೇಧವಿಲ್ಲದೆ ನಡೆಸಲಾಗುತ್ತಿರುವ ಶನೀಶ್ವರ ದೇವಸ್ಥಾನದ ಆಡಳಿತ ಮಂಡಲಿಯಲ್ಲಿ ಎಲ್ಲಾ ಜಾತಿಗಳ ಜನರೂ ಇದ್ದು ಭಕ್ತರಿಂದ ಸಂಗ್ರಹವಾದ ಹಣದಲ್ಲಿ ಬಡವರಿಗೆ ಕಲ್ಯಾಣಮಂಟಪ ನಿರ್ಮಿಸಲಾಗುತ್ತಿದೆ. ಅಲ್ಲದೆ ಪ್ರತಿ ವರ್ಷವೂ ಆರಾಧನೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚಿನ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸುತ್ತಿದ್ದು ಈಗಷ್ಟೇ ಅಭಿವೃದ್ದಿ ಹೊಂದುತ್ತಿದೆ. ಸಂಘಟನೆಗಳ ಅಬ್ಬರ ಹೆಚ್ಚಾಗುತ್ತಿದ್ದು, ಸುಮ್ಮನಿರುವುದು ನಮ್ಮದೇ ತಪ್ಪು ಎಂಬ ಭಾವನೆ ಮೂಡುವಂತಾಗಿದೆ. ಆದ್ದರಿಂದ 18ರಂದು ಸಂಘಟನೆಗಳು ಆಯೋಜಿಸಿರುವ ಜಾಥಾ ನಿಲ್ಲಿಸದಿದ್ದರೆ ಇದೇ ಶನಿವಾರ ಪಟ್ಟಣದಲ್ಲಿ ದೇವಸ್ಥಾನ ಉಳಿಸಿ ಹೆಸರಿನಲ್ಲಿ ಬೃಹತ್ ಜಾಥಾ ಆಯೋಜಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News