ಅಗ್ನಿ ಅನಾಹುತ ತಡೆಯಲು ಹೆಲಿಕಾಪ್ಟರ್ ಬಳಕೆಗೆ ಅಗ್ನಿಶಾಮಕ ಇಲಾಖೆ ಮಾಸ್ಟರ್ ಪ್ಲಾನ್

Update: 2019-06-16 17:58 GMT

ಬೆಂಗಳೂರು, ಜೂ.16: ಬಹುಮಹಡಿ ಕಟ್ಟಡಗಳಲ್ಲಾಗುವ ಅನಾಹುತಕ್ಕೆ ತ್ವರಿತವಾಗಿ ಸ್ಪಂದಿಸಲು ಹೆಲಿಫೈರ್ ಇಂಜಿನ್ ಬಳಕೆ ಅತ್ಯವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿರುವ ರಾಜ್ಯ ಅಗ್ನಿಶಾಮಕ ಇಲಾಖೆ, ಗುತ್ತಿಗೆ ಆಧಾರದಲ್ಲಿ ಪ್ರತ್ಯೇಕ ಹೆಲಿಕಾಪ್ಟರ್ ಪಡೆಯಲು ಸಿದ್ಧತೆ ನಡೆಸಿದೆ. ಈ ಕುರಿತಂತೆ ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿಗಳು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಜೊತೆ ಮಾತುಕತೆ ನಡೆಸಿದ್ದು, ಸರಕಾರದಿಂದಲೂ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎನ್ನಲಾಗಿದೆ. 

ಸದ್ಯ ಅಗ್ನಿಶಾಮಕ ಇಲಾಖೆ ಎಚ್‌ಎಎಲ್ ಜೊತೆ 3 ವರ್ಷದ ಅವಧಿಗೆ ಒಂದು ಹೆಲಿಕಾಪ್ಟರ್ ಗುತ್ತಿಗೆ ಪಡೆಯುವ ಬಗ್ಗೆ ಮಾತುಕತೆ ನಡೆಸಿದೆ. ಗುತ್ತಿಗೆ ಹಾಗೂ ನಿರ್ವಹಣೆಯ ಖರ್ಚುವೆಚ್ಚಗಳ ಬಗ್ಗೆ ಚರ್ಚಿಸಲಾಗಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಶೀಘ್ರದಲ್ಲಿಯೇ ಹೆಲಿಕಾಪ್ಟರ್ ಅಗ್ನಿಶಾಮಕ ದಳ ಸೇರಲಿದೆ.

ಅವಘಡಗಳಿಂದ ಎಚ್ಚೆತ್ತ ಇಲಾಖೆ: ಕಾರ್ಲಟನ್ ಕಟ್ಟಡದಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಇತ್ತೀಚೆಗೆ ಸೂರತ್‌ನ ಕಟ್ಟಡವೊಂದರಲ್ಲಿಯೂ ಅಗ್ನಿ ದುರಂತ ಸಂಭವಿಸಿ ಅನೇಕರು ಮೃತಪಟ್ಟಿದ್ದರು. ಅಲ್ಲದೆ, ಕಳೆದ ಮಾರ್ಚ್‌ನಲ್ಲಿ ಧಾರವಾಡದಲ್ಲಿ ಬಹುಮಹಡಿ ಕಟ್ಟಡ ಕುಸಿತದಿಂದಾಗಿ, 14ಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪಿ 60 ಮಂದಿ ಗಾಯಗೊಂಡಿದ್ದರು.

ಫೆಬ್ರವರಿಯಲ್ಲಿ ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಕಾಡ್ಗಿಚ್ಚಿನಿಂದಾಗಿ 40 ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ಆಗ ಮುಖ್ಯಮಂತ್ರಿಗಳು ಬೆಂಕಿ ನಂದಿಸುವ ಕೆಲಸಕ್ಕೆ ಹೆಲಿಕಾಪ್ಟರ್ ಬೇಕೆಂದು ಕೇಳಿದ್ದರು. ಕುಮಾರಸ್ವಾಮಿ ಮನವಿ ಮೇರೆಗೆ ರಕ್ಷಣಾ ಇಲಾಖೆಯ ಅನುಮತಿ ಪಡೆದ ಎಚ್‌ಎಎಲ್, ಅಗ್ನಿಶಾಮಕ ದಳಕ್ಕೆ 2 ಹೆಲಿಕಾಪ್ಟರ್ ನೀಡಿತ್ತು. ಹೀಗಾಗಿ, ಭವಿಷ್ಯದಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಲಿಕಾಪ್ಟರ್ ಬಳಸಿಕೊಳ್ಳಲು ಇಲಾಖೆ ಸಿದ್ಧತೆ ನಡೆಸುತ್ತಿದೆ.

ಹೆಲಿಫೈರ್ ಇಂಜಿನ್ ಬಳಕೆ ಹೇಗೆ ಸಹಾಯಕಾರಿ: ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸುವ ಅಗ್ನಿ ಅವಘಡಗಳಿಗೆ ಹೆಲಿಫೈರ್ ಇಂಜಿನ್‌ಗಳಿಂದ ತುರ್ತು ಸ್ಪಂದನೆ ದೊರಕಲಿದೆ. ಎತ್ತರ ಪ್ರದೇಶದಲ್ಲಿ ಸಿಲುಕಿದವರ ರಕ್ಷಣೆಯೂ ಹೆಲಿಕಾಪ್ಟರ್ ಮೂಲಕ ಸುಲಭವಾಗಿದೆ. ಕಾಡ್ಗಿಚ್ಚು ಸಂಭವಿಸಿದಾಗ ಸೂಕ್ತ ನೀರಿನ ವ್ಯವಸ್ಥೆ ಮಾಡಲು ಹೆಲಿಫೈರ್ ಇಂಜಿನ್‌ಗಳು ಸಹಾಯಕವಾಗುತ್ತವೆ. ಅಲ್ಲದೆ, ಇಲಾಖೆ ಸುಲಭವಾಗಿ ವೈಮಾನಿಕ ಸರ್ವೇ ಕೂಡಾ ನಡೆಸಬಹುದು. ಈ ಎಲ್ಲ ಉದ್ದೇಶಗಳಿಂದ ಇಲಾಖೆ ರಾಜ್ಯ ಸರಕಾರದ ಬಳಿ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News