ನಿಶ್ಚಿತಾರ್ಥ ಸಂದರ್ಭ ಗಿಡನೆಟ್ಟು ಮಾದರಿಯಾದ ನವ ಜೋಡಿ

Update: 2019-06-16 18:17 GMT

ಮಂಡ್ಯ,ಜೂ.16: ಮದ್ದೂರು ತಾಲೂಕಿನ ಅಂಬರಹಳ್ಳಿ ಗ್ರಾಮದಲ್ಲಿ ಭವ್ಯ ಮತ್ತು ತೇಜಸ್ ಅವರು ಗಿಡ ನೆಡುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡು ಪರಿಸರ ಪ್ರೇಮ ಮೆರೆದಿದ್ದಾರೆ.

ಭವ್ಯರವರ ಸಹೋದರ ಆನಂದ್ ಪರಿಸರ ಜಾಗೃತಿ ವೇದಿಕೆಯ ಸಿ.ಎ.ಹೋಬಳಿಯ ಅಧ್ಯಕ್ಷರಾಗಿದ್ದು ಹಾಗೂ ತೇಜಸ್ ಯೋಧನಾಗಿದ್ದಾರೆ.
ಈ ವೇಳೆ ಆನಂದ್ ಮಾತನಾಡಿ, ಪರಿಸರ ಮಾಲಿನ್ಯವನ್ನು ತಡೆಗಟ್ಟಬೇಕು. ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಜನರು ಈ ಬಗ್ಗೆ ಅರಿವು ಮೂಡಿಸಿಕೊಂಡು ಸ್ವಯಂ ಪ್ರೇರಿತವಾಗಿ ಗಿಡನೆಟ್ಟು ಬೆಳೆಸಬೇಕೆಂದರು.

ಸುತ್ತಮುತ್ತಲಿನ ಪರಿಸರ ಚೆನ್ನಾಗಿದ್ದರೆ ನಮಗೆ ಉತ್ತಮವಾದ ಆಮ್ಲಜನಕ ದೊರೆತು ಆರೋಗ್ಯ ವೃದ್ದಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿಅತಿಯಾಗಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದು, ಅದಕ್ಕೆ ಕಡಿವಾಣ ಹಾಕದಿದ್ದರೆ ಅವನತಿಯೆಡೆಗೆ ಸಾಗಬೇಕಾಗುವುದು ಎಂದು ಕಳವಳ ವ್ಯಕ್ತಪಡಿಸಿದರು.

ಯೋಧ ತೇಜಸ್ ಮಾತನಾಡಿ, ಭೂಮಿ ಮೇಲೆ ವಾಸಿಸುವ ಪ್ರತಿಯೊಂದು ಜೀವಿಗಳಿಗೂ ಉತ್ತಮ ಪರಿಸರ ಅಗತ್ಯವಿದ್ದು ಈ ಹಿನ್ನೆಲೆಯಲ್ಲಿ ಗಿಡಗಳನ್ನು ನೆಡುವ ಸಂಕಲ್ಪವನ್ನು ನಾವು ಮಾಡಬೇಕು ಎಂದರು.

ಇದೇ ವೇಳೆ ಭವ್ಯರವರ ತಾಯಿ ನಿಂಗಮ್ಮ, ಪರಿಸರ ಜಾಗೃತಿ ವೇದಿಕೆಯ ನಿರ್ದೇಶಕಿ ಅನುಪಮ ಸತೀಶ್, ನಂದಿನಿ, ನಿರ್ಮಲ ಸೇರಿದಂತೆ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News