ನಿರ್ಮಾಣ ಹಂತದ ನೀರಿನ ಟ್ಯಾಂಕ್ ಸೆಂಟ್ರಿಂಗ್ ಕುಸಿದು ಮೂವರು ಮೃತ್ಯು

Update: 2019-06-17 14:42 GMT

ಬೆಂಗಳೂರು, ಜೂ.17: ರಾಜಧಾನಿ ಬೆಂಗಳೂರಿನ ಹೆಬ್ಬಾಳ ವ್ಯಾಪ್ತಿಯ ಜೋಗಪ್ಪಲೇಔಟ್‌ನಲ್ಲಿ ನಿರ್ಮಾಣ ಹಂತದ ನೀರಿನ ಟ್ಯಾಂಕ್ ಸೆಂಟ್ರಿಂಗ್ ಕುಸಿದ ಪರಿಣಾಮ ಮೂವರು ಮೃತಪಟ್ಟಿದ್ದು, 19 ಮಂದಿ ಗಾಯಗೊಂಡಿದ್ದಾರೆ.

ದಾವಣಗೆರೆ ಮೂಲದ ಸಿವಿಲ್ ಇಂಜಿನಿಯರ್ ಕೃಷ್ಣ ಯಾದವ್(25), ತಮಿಳುನಾಡಿನ ಸಿವಿಲ್ ಇಂಜಿನಿಯರ್ ಪ್ರಭುರಾಮ್(25) ಹಾಗೂ ಪಶ್ಚಿಮ ಬಂಗಾಳದ ಸೂಪರ್ ವೈಸರ್ ಸುಮಂತ ಖಾರ್ ಮೃತಪಟ್ಟವರು. ಘಟನೆಯಲ್ಲಿ ಅರುಣ್, ರಂಜನ್, ಕಾರ್ತಿಕ್ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

ನಗರದ ಜೋಗಪ್ಪಲೇಔಟ್‌ನಲ್ಲಿ ನೀರು ಶುದ್ಧೀಕರಣ ಘಟಕ ನಿರ್ಮಿಸಲು ಸುಮಾರು 8 ನೀರಿನ ಘಟಕಗಳನ್ನು ನಿರ್ಮಾಣ ಮಾಡುವ ಕಾರ್ಯ ನಡೆಯುತ್ತಿತ್ತು. ಸೋಮವಾರ ಸುಮಾರು 30ಕ್ಕೂ ಹೆಚ್ಚು ಕಾರ್ಮಿಕರು ಕಟ್ಟಡದ ಸೆಂಟ್ರಿಂಗ್ ಕಾರ್ಯದಲ್ಲಿ ತೊಡಗಿದ್ದರು. ಆದರೆ ಈ ವೇಳೆ, ಏಕಾಏಕಿ ಕಟ್ಟದ ಸೆಂಟ್ರಿಂಗ್ ಕುಸಿದು ಸುಮಾರು 80 ಅಡಿ ಅಳಕ್ಕೆ ಉರುಳಿ ಬಿದ್ದಿದೆ ಎನ್ನಲಾಗಿದೆ.

ಘಟನೆ ನಡೆಯುತ್ತಿದಂತೆ ಮಾಹಿತಿ ಪಡೆದ ಅಗ್ನಿ ಶಾಮಕ ಸಿಬ್ಬಂದಿ, ಅಮೃತಹಳ್ಳಿ ಠಾಣಾ ಪೋಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯವನ್ನು ನಡೆಸಿದ್ದಾರೆ. ಘಟನೆಯಲ್ಲಿ 20 ಜನರನ್ನು ರಕ್ಷಣೆ ಮಾಡಿದ್ದು, ಇನ್ನು, ಹಲವು ಮಂದಿ ಸೆಂಟ್ರಿಂಗ್ ಕೆಳಗೆ ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಈಗಾಗಲೇ ರಕ್ಷಣೆ ಮಾಡಿರುವ ಮಂದಿಯಲ್ಲಿ ಮೂವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಗಾಯಗೊಂಡ ಕಾರ್ಮಿಕರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನಿರ್ಮಾಣ ಹಂತದಲ್ಲಿದ್ದ ವಾಟರ್ ಟ್ಯಾಂಕ್ ಬಿಡಬ್ಲೂಎಸ್‌ಎಸ್‌ಬಿ ಕಚೇರಿಗೆ ಸೇರಿದೆ ಎಂಬ ಮಾಹಿತಿ ಲಭಿಸಿದೆ.

ಘಟನಾ ಸ್ಥಳಕ್ಕೆ ಸಚಿವ ಕೃಷ್ಣಭೈರೇಗೌಡ, ಶಾಸಕ ಭೈರತಿ ಸುರೇಶ್, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

8 ಜನರ ಬಂಧನ

ನೀರಿನ ಟ್ಯಾಂಕ್ ಸೆಂಟ್ರಿಂಗ್ ಕುಸಿತ ಪ್ರಕರಣ ಸಂಬಂಧ ಖಾಸಗಿ ಕಂಪೆನಿ ಇಂಜಿಯನಿಯರ್ ಹಾಗೂ ಸಂಬಂಧಿಸಿದ ಸಿಬ್ಬಂದಿ ಸೇರಿ ಒಟ್ಟು 8 ಜನರನ್ನು ಬಂಧಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.

5 ಲಕ್ಷ ಪರಿಹಾರ; ಕ್ರಿಮಿನಲ್ ಕೇಸ್

ನೀರಿನ ಟ್ಯಾಂಕ್ ಸೆಂಟ್ರಿಂಗ್ ಕುಸಿತ ಪ್ರಕರಣದಲ್ಲಿ ಗಾಯಗೊಂಡವರನ್ನು ಸಚಿವ ಕೃಷ್ಣ ಭೈರೇಗೌಡ ಆಸ್ಪತ್ರೆಯಲ್ಲಿ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.

ಬಳಿಕ ಅವರು, ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ಸರಕಾರ ಘೋಷಣೆ ಮಾಡಿದ್ದು, ಸೋಮವಾರವೇ ಪರಿಹಾರ ಹಾಗೂ ಚಿಕಿತ್ಸೆಯ ವೆಚ್ಚವನ್ನು ಭರಿಸಲಿದೆ. ಅದೇ ರೀತಿ, ಘಟನೆಗೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News