ಭೂಮಿ ಉಳಿವಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ: ಶಾಸಕ ಆನಂದ್ ಸಿಂಗ್

Update: 2019-06-17 13:04 GMT

ಬಳ್ಳಾರಿ, ಜೂ. 17: ಜಿಂದಾಲ್ ಕಂಪೆನಿಗೆ ಭೂಮಿ ಮಾರಾಟ ವಿಚಾರ ಸಂಬಂಧ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಶಾಸಕರೇ ವಿರೋಧ ವ್ಯಕ್ತಪಡಿಸುತ್ತಿರುವುದು ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಮೈತ್ರಿ ಸರಕಾರಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿದೆ.

ಮಾಜಿ ಸಚಿವ ಎಚ್.ಕೆ.ಪಾಟೀಲ್ ಜಿಂದಾಲ್‌ಗೆ ಯಾವುದೇ ಕಾರಣಕ್ಕೂ ಭೂಮಿ ನೀಡಬಾರದು ಎಂದು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೆ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್, ಮಾಜಿ ಶಾಸಕ ಅನಿಲ್ ಲಾಡ್ ‘ಬಳ್ಳಾರಿಯನ್ನು ರಿಪಬ್ಲಿಕ್ ಆಫ್ ಜಿಂದಾಲ್’ ಆಗಲು ಬಿಡುವುದಿಲ್ಲ. ಇದಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ’ ಎಂದು ಘೋಷಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 3,666 ಎಕರೆಯಷ್ಟು ಭೂಮಿಯನ್ನು ಜಿಂದಾಲ್ ಕಂಪೆನಿಗೆ ಏಕೆ ನೀಡಬೇಕು. ಕಂಪೆನಿ ಎಷ್ಟು ಜನರಿಗೆ ಉದ್ಯೋಗ ನೀಡಿದೆ ಮತ್ತು ಎಷ್ಟು ಗ್ರಾಮಗಳನ್ನು ಅಭಿವೃದ್ಧಿಪಡಿಸಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಆನಂದ್‌ಸಿಂಗ್ ಸವಾಲು ಹಾಕಿದರು.

ಸ್ಥಳೀಯ ಪೊಲೀಸರು ಮತ್ತು ಕೆಲ ಅಧಿಕಾರಿಗಳು ಜಿಂದಾಲ್ ಕಂಪೆನಿಯ ರಕ್ಷಣೆಗೆ ನಿಂತಿದ್ದು, ಸಚಿವ ಇ.ತುಕಾರಾಂ ಅವರು ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಅವರು ಮೌನವನ್ನೇಕೆ ವಹಿಸಿದ್ದಾರೆಂದು ಅರ್ಥವಾಗುತ್ತಿಲ್ಲ. ಜಿಂದಾಲ್‌ಗೆ ಗುತ್ತಿಗೆ ಆಧಾರದ ಮೇಲೆ ಭೂಮಿ ನೀಡಲು ನಮ್ಮ ಅಭ್ಯಂತರವಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

ಜಿಂದಾಲ್‌ಗೆ ಸರಕಾರಿ ಭೂಮಿ ಮಾರಾಟ ಮಾಡುವುದಕ್ಕೆ ನಮ್ಮ ವಿರೋಧವಿದೆ. ಯಾವುದೇ ಕಾರಣಕ್ಕೂ ಭೂಮಿಯನ್ನು ಮಾರಾಟ ಮಾಡಬಾರದು. ಇದಕ್ಕಾಗಿ ನಾವು ಯಾವುದೇ ತ್ಯಾಗಕ್ಕೂ ಸಿದ್ಧ. ಭೂಮಿ ಉಳಿಸಲು ಬಳ್ಳಾರಿಯಿಂದಲೇ ಬೆಂಗಳೂರಿಗೆ ಪಾದಯಾತ್ರೆ ನಡೆಸುತ್ತೇವೆ ಎಂದು ಆನಂದ್ ಸಿಂಗ್ ಪ್ರಕಟಿಸಿದರು.

ಮಾಜಿ ಶಾಸಕ ಅನಿಲ್ ಲಾಡ್ ಮಾತನಾಡಿ, ಜಿಂದಾಲ್ ಕಂಪೆನಿ ಅಗ್ಗದ ಬೆಲೆಗೆ ಸರಕಾರಿ ಭೂಮಿ ಖರೀದಿಸಿ, ಬಳಿಕ ಪರಿವರ್ತಿಸಿ ಅದೇ ಭೂಮಿಯನ್ನು ಕೋಟ್ಯಂತರ ರೂ.ಗಳಿಗೆ ಬ್ಯಾಂಕಿನಲ್ಲಿ ಅಡಮಾನ ಇರಿಸದಂತೆ ಷರತ್ತು ವಿಧಿಸಬೇಕು ಎಂದು ಆಗ್ರಹಿಸಿದರು.

ಜಿಂದಾಲ್ ಕಂಪೆನಿಗೆ ಇದುವರೆಗೂ ಒಟ್ಟು 11ಸಾವಿರ ಎಕರೆ ಭೂಮಿ ನೀಡಿದ್ದು, ಆ ಭೂಮಿಯನ್ನು ಏನು ಮಾಡಿದೆ ಎಂಬುದನ್ನು ಸರಕಾರ ಪರಿಶೀಲಿಸಬೇಕು. ಈ ಕಂಪೆನಿಯಲ್ಲಿ ಎಷ್ಟು ಮಂದಿ ಸ್ಥಳೀಯರು ಹಾಗೂ ಹೊರ ರಾಜ್ಯದವರು ಉದ್ಯೋಗ ಮಾಡುತ್ತಿದ್ದಾರೆಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

‘ನಾವು ಸ್ಥಳೀಯ ಶಾಸಕರಾಗಿದ್ದು, ಜನರ ಒತ್ತಾಸೆಯ ಮೇರೆಗೆ ಜಿಂದಾಲ್‌ಗೆ ಭೂಮಿ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದೇವೆ. ಸರಕಾರದ ನಿರ್ಧಾರಕ್ಕಾಗಲಿ, ಕಂಪೆನಿಯ ವಿರುದ್ಧವಾಗಲಿ ನಾವು ಇಲ್ಲ. ಜನರ ಪರವಾಗಿ ನಾವಿದ್ದೇವೆ. ಸರಕಾರವೂ ಜನರ ಆಶಯದಂತೆ ನಡೆದುಕೊಳ್ಳಬೇಕು’

-ಆನಂದ್‌ ಸಿಂಗ್, ವಿಜಯನಗರ (ಹೊಸಪೇಟೆ)ಕ್ಷೇತ್ರದ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News