ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಲೋಕ್ ಕುಮಾರ್ ಅಧಿಕಾರ ಸ್ವೀಕಾರ

Update: 2019-06-17 14:16 GMT

ಬೆಂಗಳೂರು, ಜೂ.17: ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಅಲೋಕ್ ಕುಮಾರ್ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.

ಇಲ್ಲಿನ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಸಂಜೆ ನಿರ್ಗಮಿತ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರು ಹೂಗುಚ್ಛ ನೀಡಿ, ಕಡತಗಳಿಗೆ ಸಹಿ ಹಾಕುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

ನಗರದ ಅಪರಾಧ ವಿಭಾಗದ(ಸಿಸಿಬಿ) ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರನ್ನು 34ನೇ ನಗರ ಪೊಲೀಸ್ ಆಯುಕ್ತರಾಗಿ ನೇಮಿಸಿ ರವಿವಾರ ಆದೇಶ ಹೊರಡಿಸಿದ್ದ ರಾಜ್ಯ ಸರಕಾರ, ಟಿ.ಸುನೀಲ್ ಕುಮಾರ್ ಅವರನ್ನು ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಿದೆ.

ಈ ಹಿಂದೆ ಕರ್ನಾಟಕ ರಾಜ್ಯ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್‌ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಹಾಗೂ ಆಡಳಿತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಟಿ.ಸುನೀಲ್ ಕುಮಾರ್ ಅವರು, 2017ನೇ ಸಾಲಿನ ಜು.31 ರಂದು ನಗರ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದರು.

ಅಲೋಕ್ ಕುಮಾರ್ ಹಿನ್ನೆಲೆ?: ಬಿಹಾರ ಮೂಲದ ಸಹರಾ ಜಿಲ್ಲೆಯವರಾದ ಅಲೋಕ್ ಕುಮಾರ್, 1969ರ ಮಾರ್ಚ್ 8ರಂದು ಜನಿಸಿದರು. ಎಂಬಿಎ ಶಿಕ್ಷಣ ಪಡೆದಿರುವ ಅವರು, 1994ರಲ್ಲಿ ಐಪಿಎಸ್ ಅಧಿಕಾರಿಯಾಗಿ ನೇಮಕಗೊಂಡರು. ಮೊದಲು ಬೆಳಗಾವಿಯಲ್ಲಿ ಎಎಸ್ಪಿಯಾಗಿ ಕಾರ್ಯಾರಂಭಿಸಿದ ಅವರು, ಚಿತ್ರದುರ್ಗ, ಗುಲ್ಬರ್ಗಾ, ದಾವಣಗೆರೆಗಳಲ್ಲಿ ಎಸ್ಪಿ ಆಗಿ ಸೇವೆ ಸಲ್ಲಿಸಿದ್ದಾರೆ.

ಬೆಂಗಳೂರು ದಕ್ಷಿಣ ವಿಭಾಗಕ್ಕೆ ಡಿಸಿಪಿಯಾಗಿ ನೇಮಕಗೊಂಡಿದ್ದ ಅವರು, ತದನಂತರ, ಡಿಐಜಿ(ಸಿಎಆರ್)ಗೆ ಭಡ್ತಿ ದೊರೆತಿದೆ. ಅಪರಾಧ ವಿಭಾಗಕ್ಕೆ ಜಂಟಿ ಆಯುಕ್ತರಾಗಿ ನೇಮಕಗೊಂಡಿದ್ದ ಅವರನ್ನು 2015ರಲ್ಲಿ ಮತ್ತೆ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸರಕಾರ ನೇಮಕ ಮಾಡಿತ್ತು.

ವರ್ಗಾವಣೆ

ಟಿ.ಸುನೀಲ್ ಕುಮಾರ್- ಎಡಿಜಿಪಿ, ಪೊಲೀಸ್ ನೇಮಕಾತಿ ವಿಭಾಗ

ಅಲೋಕ್ ಕುಮಾರ್- ಬೆಂಗಳೂರು ನಗರ ಪೊಲೀಸ್ ಆಯುಕ್ತ

ಅಮೃತ್ ಪಾಲ್- ಐಜಿಪಿ, ದಾವಣಗೆರೆ

ಉಮೇಶ್‌ಕುಮಾರ್- ಹೆಚ್ಚುವರಿ ಪೊಲೀಸ್ ಆಯುಕ್ತ(ಬೆಂಗಳೂರು)

ಬಿ.ಕೆ.ಸಿಂಗ್- ಕಾರ್ಯದರ್ಶಿ, ಗೃಹ ಇಲಾಖೆ

ಸೌಮೇಂದು ಮುಖರ್ಜಿ- ಐಜಿಪಿ, ಆಂತರಿಕ ಭದ್ರತಾ ವಿಭಾಗ

ರಾಘವೇಂದ್ರ ಸುಹಾಸ್- ಐಜಿಪಿ, ಮೈಸೂರು

ಬಿ.ಆರ್.ರವಿಕಾಂತೇಗೌಡ-ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ), ಬೆಂಗಳೂರು

ಅಮಿತ್ ಸಿಂಗ್- ಕಮಾಂಡೇಟ್, ಗೃಹ ರಕ್ಷಕ ದಳ

ರಾಮ್ ನಿವಾಸ್ ಸೆಪೆಟ್- ಎಸ್ಪಿ, ಎಸಿಬಿ

ಎಂ.ಎನ್.ಅನುಚೇತ್- ಎಸ್ಪಿ, ಬೆಂಗಳೂರು ರೈಲ್ವೆ

ಬಿ.ರಮೇಶ್- ಡಿಸಿಪಿ, ಬೆಂಗಳೂರು ಪಶ್ಚಿಮ ವಿಭಾಗ

ರವಿ ಚನ್ನಣ್ಣನವರ್- ಎಸ್ಪಿ, ಸಿಐಡಿ

ಭೀಮಾಶಂಕರ ಗುಳೇದ್- ಡಿಸಿಪಿ, ಬೆಂಗಳೂರು ಈಶಾನ್ಯ ವಿಭಾಗ

ಸಿ.ಬಿ.ರಿಷ್ಯಂತ್- ಎಸ್ಪಿ, ಮೈಸೂರು ಜಿಲ್ಲೆ

ಎಂ.ಎಸ್.ಮುಹಮ್ಮದ್ ಸುಚೇತ್- ಎಸ್ಪಿ, ಕೆಜಿಎಫ್

ಟಿ.ಪಿ.ಶಿವಕುಮಾರ್- ಎಸ್ಪಿ, ಬೆಂಗಳೂರು ಗ್ರಾಮಾಂತರ

ಎನ್.ವಿಷ್ಣುವರ್ಧನ್- ಡಿಸಿಪಿ(ಆಡಳಿತ), ಬೆಂಗಳೂರು ಕಮಿಷನರೇಟ್

ಕಲಾ ಕೃಷ್ಣಸ್ವಾಮಿ- ನಿರ್ದೇಶಕಿ, ವಿಧಿ ವಿಜ್ಞಾನ ಪ್ರಯೋಗಾಲಯ

ಅಲೋಕ್ ಕುಮಾರ್ ವಿವಾದ ?

ರೌಡಿಗಳಿಗೆ ಪಾಠ ಕಲಿಸುವ ಪೊಲೀಸ್ ಅಧಿಕಾರಿ ಎಂದೇ ಹೆಸರು ಮಾಡಿರುವ ಅಲೋಕ್ ಕುಮಾರ್ ಅವರು ಸಹ ವಿವಾದದಲ್ಲಿ ಸಿಲುಕಿಕೊಂಡಿದ್ದರು.

ಒಂದಂಕಿ ಲಾಟರಿ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿತ್ತು. ತದನಂತರ, ಸರಕಾರವು ಅವರನ್ನು ಅಮಾನತು ಮಾಡಿತ್ತು. ಒಂದು ವರ್ಷದ ಬಳಿಕ, ಗುಲ್ಬಾರ್ಗಾ ಐಜಿಯಾಗಿ ಭಡ್ತಿ ನೀಡಿತ್ತು. 2017ರಲ್ಲಿ ಬೆಳಗಾವಿ ಐಜಿಯಾಗಿ ವರ್ಗಾವಣೆ ಗೊಳಿಸಿತ್ತು. 2018ರಲ್ಲಿ ಮತ್ತೆ ಸಿಸಿಬಿಗೆ ಹೆಚ್ಚುವರಿ ಆಯುಕ್ತ ಸ್ಥಾನಕ್ಕೆ ಸರಕಾರವು ನೇಮಕ ಮಾಡಿತ್ತು.

‘ಖುಷಿ ತಂದಿದೆ’ ತಾನೂ 2 ವರ್ಷದಿಂದ ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದು, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ, ಫಲಿತಾಂಶ, ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಯದಂತೆ ಎಲ್ಲ ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದಾರೆ. ಸರಗಳ್ಳತನ ಸೇರಿದಂತೆ ಹಲವು ಗಂಭೀರ ಪ್ರಕರಣಗಳಿಗೆ ಕಡಿವಾಣ ಹಾಕಲಾಗಿದೆ.

-ಟಿ.ಸುನೀಲ್ ಕುಮಾರ್, ನಿರ್ಗಮಿತ ನಗರ ಪೊಲೀಸ್ ಆಯುಕ್ತ

ಈ ಹಿಂದಿನ ನಗರ ಪೊಲೀಸ್ ಆಯುಕ್ತರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದು, ನಗರ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಪ್ರಮಾಣ ತಗ್ಗಿಸಲು ಬದ್ಧ.

-ಅಲೋಕ್ ಕುಮಾರ್, ನಗರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News