ಚಿಕ್ಕಮಗಳೂರು: ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಖಾಸಗಿ ಆಸ್ಪತ್ರೆಗಳು ಬಂದ್

Update: 2019-06-17 13:50 GMT

ಚಿಕ್ಕಮಗಳೂರು, ಜೂ.17: ಇತ್ತೀಚೆಗೆ ಕೊಲ್ಕತ್ತದಲ್ಲಿ ಎನ್.ಆರ್.ಎಸ್ ಸಂಸ್ಥೆಯ ಕಿರಿಯ ವೈದ್ಯ ಡಾ.ಪರೀಭಾ ಮುಖರ್ಜಿಯವರ ಮೇಲೆ ರೋಗಿಯ ಸಂಬಂಧಿಕರು ನಡೆಸಿರುವ ಹಲ್ಲೆಯನ್ನು ಖಂಡಿಸಿ ಜಿಲ್ಲಾ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ಕೆಲಸ ಸ್ಥಗಿತಗೊಳಿಸಿ ಕಪ್ಪುಪಟ್ಟಿ ಧರಿಸಿ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಸೋಮವಾರ ಧರಣಿ ನಡೆಸಲಾಯಿತು.

ಈ ವೇಳೆ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ಕಾರ್ಯದರ್ಶಿ ಡಾ.ಸಂತೋಷ್ ನೇಥಾ, ಪಶ್ಚಿಮ ಬಂಗಾಳದಲ್ಲಿ ವೈದ್ಯ ಪರೀಭಾ ಮುಖರ್ಜಿಯವರ ಮೇಲೆ ರೋಗಿಯ ಸಂಬಂಧಿಕರು ನಡೆಸಿರುವ ಮಾರಣಾಂತಿಕ ಹಲ್ಲೆಯನ್ನು ಚಿಕ್ಕಮಗಳೂರು ಐಎಂಎ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಅದರೊಂದಿಗೆ ಹಲ್ಲೆಗೊಳಗಾದ ಇತರ ಹಿರಿಯ ವೈದ್ಯರುಗಳಿಗೆ ನೈತಿಕ ಬೆಂಬಲವನ್ನು ಸೂಚಿಸುತ್ತದೆ ಎಂದರು.

ಈ ಘಟನೆಯನ್ನು ಸರಕಾರ ಸಮಗ್ರ ತನಿಖೆ ನಡೆಸಿ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ ಅವರು ಕೇಂದ್ರ ಸರ್ಕಾರ ವೈದ್ಯ ಹಾಗೂ ವೈದ್ಯಕೀಯೇತರ ಸಿಬ್ಬಂದಿಗಳ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸಲು ಸಂಘಟನೆ ಆಗ್ರಹಿಸುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಕಳೆದ 10 ವರ್ಷಗಳಿಂದ ವೈದ್ಯಕೀಯ ಸೇವೆ ನೀಡುವ ಸಂಸ್ಥೆಗಳಿಗೆ ಹಾನಿ ಮಾಡುವವರ ಮತ್ತು ವೈದ್ಯಕೀಯ ಸೇವೆ ನೀಡುವ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವವರ ಮೇಲೆ ಕಠಿಣ ಕಾನೂನು ಕ್ರಮ ಜಾರಿಯಲ್ಲಿದ್ದರೂ ಈವರೆಗೂ ತಪ್ಪಿತಸ್ಥರನ್ನು ಸರ್ಕಾರಗಳು ಶಿಕ್ಷೆಗೆ ಒಳಪಡಿಸಿದ ಉದಾಹರಣೆಗಳಿರುವುದಿಲ್ಲ ಈ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಿ ದುಷ್ಕ್ರರ್ಮಿಗಳಿಗೆ ಜಾಮೀನು ದೊರೆಯದಂತೆ ವೈದ್ಯರಿಗೆ ಮಾನಸಿಕ ಮತ್ತು ದೈಹಿಕ ಹಲ್ಲೆಯಾಗದಿರುವಂತೆ ಕ್ರಮಕೈಗೊಳ್ಳಬೇಕಿದೆ ಎಂದರು. ದುಷ್ಕ್ರರ್ಮಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಗೃಹ ಸಚಿವರಿಗೆ ಪತ್ರ ರವಾನಿಸಲಾಗಿದೆ ಎಂದು ಹೇಳಿದರು.

ಹಿರಿಯ ವೈದ್ಯ ಡಾ.ವಿಜಯ ಕುಮಾರ್ ಮಾತನಾಡಿ, ದೇಶದಲ್ಲಿ ಹಲವೆಡೆ ಇಂತಹ ಪ್ರಕರಣಗಳು ನಡೆದಿದ್ದರೂ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳದಿರುವ ಸರಕಾರದ ನಿರ್ಲಕ್ಷ್ಯ ಧೋರಣೆ ಖಂಡನೀಯ ಎಂದು ಹೇಳಿದರು.

ಈ ಪ್ರಕರಣವನ್ನು ಖಂಡಿಸಿ ದೇಶಾದ್ಯಂತ ವೈದ್ಯರು ಕರ್ತವ್ಯ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲೆಯ ವೈದ್ಯರು ಮಾನವೀಯ ನೆಲೆಗಟ್ಟಿನಲ್ಲಿ ತುರ್ತು ಚಿಕಿತ್ಸೆ ಮತ್ತು ಪ್ರಸವದ ಪ್ರಕರಣಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು. ಧರಣಿಯಲ್ಲಿ ವೈದ್ಯರಾದ ಐಎಂಎನ ಅಧ್ಯಕ್ಷರಾದ ಡಾ.ಮೋಹನ್, ಡಾ.ನಿಯತ್, ಡಾ.ರವಿಪ್ರಕಾಶ್, ಡಾ.ಕುಚೇಂದ್ರ, ಡಾ.ಸುನೀಲ್, ಡಾ.ಕೌಶಿಕ್, ಡಾ.ಚಂದ್ರಶೇಖರ್, ಡಾ.ಗೀತಾ ಸೇರಿದಂತೆ ಹಲವರು ಭಾಗವಹಿಸಿದ್ದರು.

ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಸೋಮವಾರ ನಗರದಲ್ಲಿ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಧರಣಿ ಹಿನ್ನೆಲೆಯಲ್ಲಿ ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳನ್ನು ಬಂದ್ ಮಾಡಲಾಗಿತ್ತು. ಕೆಲ ಆಸ್ಪತ್ರೆಗಳಲ್ಲಿ ತುರ್ತು ಸೇವೆಗಳನ್ನು ಹೊರತು ಪಡಿಸಿ ಉಳಿದಂತೆ ಎಲ್ಲ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ನಗರದ ಬಹುತೇಕ ಕ್ಲಿನಿಕ್‍ಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಆಸ್ಪತ್ರೆಗಳ ಮುಂದೆ ಮುಷ್ಕರದ ಬಿತ್ತಿಪತ್ರಗಳನ್ನು ಅಂಟಿಸಿದ್ದು ಕಂಡುಬಂತು. ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಕೆಲ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಮುಷ್ಕರದ ವಿಷಯ ತಿಳಿದು ಸರಕಾರಿ ಆಸ್ಪತ್ರೆಗಳತ್ತ ಬರುತ್ತಿದ್ದುದು ಕಂಡು ಬಂತು. ಈ ಕಾರಣದಿಂದಾಗಿ ನಗರದ ಜಿಲ್ಲಾಸ್ಪತ್ರೆ ಸೋಮವಾರ ಭಾರೀ ಜನರಿಂದ ತುಂಬಿ ತುಳುಕುತ್ತಿತ್ತು. ಜಿಲ್ಲಾಸ್ಪತ್ರೆಯಲ್ಲಿ ಭಾರಿ ಜನಸಂದಣಿ ಇದ್ದ ಪರಿಣಾಮ ಸಾರ್ವಜನಿಕರು ಹಾಗೂ ರೋಗಿಗಳು ಚಿಕಿತ್ಸೆಗಾಗಿ ಸರತಿ ಸಾಳಿನಲ್ಲಿ ನಿಂತಿದ್ದ ದೃಶ್ಯಗಳು ಕಂಡುಬಂದವು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News