ಐಎಂಎ ಮುಖ್ಯಸ್ಥ ಮನ್ಸೂರ್‌ನನ್ನು ಪರಿಚಯಿಸಿದ್ದು ರೋಷನ್ ಬೇಗ್: ಸಚಿವ ದೇಶಪಾಂಡೆ ಆರೋಪ

Update: 2019-06-17 15:52 GMT

ಬೆಂಗಳೂರು, ಜೂ. 17: ‘ಐ ಮಾನಿಟರಿ ಅಡ್ವೈಸರಿ(ಐಎಂಎ) ಕಂಪೆನಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್‌ನನ್ನು ಶಾಸಕ ರೋಷನ್‌ಬೇಗ್ ವಿಧಾನಸೌಧಕ್ಕೆ ಕರೆತಂದು ನನಗೆ ಪರಿಚಯಿಸಿದ್ದರು’ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮನ್ಸೂರ್ ತುಂಬ ಒಳ್ಳೆಯವರು. ಸರಕಾರಿ ಶಾಲೆಯನ್ನು ದತ್ತು ಪಡೆದು ನಡೆಸುತ್ತಿದ್ದಾರೆ. ಇವರ ವಿರುದ್ಧ ಆರ್‌ಬಿಐ ತನಿಖೆ ನಡೆಯುತ್ತಿದೆ, ಸಹಾಯ ಮಾಡಿ ಎಂದು ಕೋರಿದ್ದರು ಎಂದು ತಿಳಿಸಿದರು.

ಈ ವೇಳೆ ತಾನು ಕಾನೂನು ಪ್ರಕಾರ ಸಹಾಯ ಮಾಡುವೆ. ಆರ್‌ಬಿಐ ತನಿಖೆಗೆ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ ಕ್ರಮ ವಹಿಸುತ್ತೇನೆ ಎಂದಿದ್ದೆ. ಕರ್ನಾಟಕ ಪ್ರೊಟೆಕ್ಷನ್ ಆಫ್ ಡಿಫಾಜಿಟ್ ಆ್ಯಕ್ಟ್-2004ರ ಕಾಯ್ದೆಯನ್ನು ತಾಂತ್ರಿಕ ಸಮಸ್ಯೆ ಮುಂದಿಟ್ಟು ಕುಳಿತುಕೊಳ್ಳುವ ಬದಲು ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಕಾನೂನು ತಿದ್ದುಪಡಿಗೆ ಕಾನೂನು ಇಲಾಖೆಗೆ ಕೋರಲಾಗಿದೆ ಎಂದರು.

ಐಎಂಎ ವಂಚನೆ ಪ್ರಕರಣದಲ್ಲಿ ಹೂಡಿಕೆದಾರರನ್ನು ಶೇರುದಾರರನ್ನಾಗಿ ಮಾಡಿದ್ದು, ಇದು ಕೆಪಿಐಡಿ ಕಾಯ್ದೆ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಪೊಲೀಸರು ವರದಿ ನೀಡಿದ್ದರು. ಕೆಪಿಐಡಿ ಕಾಯ್ದೆಯಡಿ ದೂರು ದಾಖಲಾದರೆ ಆಸ್ತಿ ಮುಟ್ಟಗೋಲು ಹಾಕಿಕೊಳ್ಳುವ ಅವಕಾಶ ಇದೆ ಎಂದು ಅವರು ತಿಳಿಸಿದರು.

ನಾಲ್ಕೈದು ತಿಂಗಳಲ್ಲಿ 17 ಪ್ರಕರಣಗಳಲ್ಲಿ 11 ಪ್ರಕರಣಗಳನ್ನು ಆಸ್ತಿ ಮುಟ್ಟುಗೋಲಿಗೆ ಸೂಚನೆ ನೀಡಲಾಗಿದೆ. ಕೇಂದ್ರದ ಸುಗ್ರೀವಾಜ್ಞೆ ರಾಜ್ಯ ಸರಕಾರಕ್ಕೆ ಬಂದಿದೆ. ಈ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News