ಐಎಂಎ ವಂಚನೆ ಪ್ರಕರಣ: ಕಾನೂನು ಕ್ರಮಕ್ಕೆ ಎಸ್‌ಡಿಪಿಐ ಆಗ್ರಹ

Update: 2019-06-17 16:04 GMT

ಬೆಂಗಳೂರು, ಜೂ.16: ಐಎಂಎ ಜ್ಯುವೆಲ್ಸ್ ಸಂಸ್ಥೆ ಸಾವಿರಾರು ಬಡ ಹೂಡಿಕೆದಾರರ ಹಣವನ್ನು ಪಡೆದು ವಂಚನೆ ಮಾಡಿದ ಪ್ರಕರಣವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸಿದೆ.

ಸೋಮವಾರ ನಗರದಲ್ಲಿನ ಪಕ್ಷದ ರಾಜ್ಯ ಕಚೇರಿಯಲ್ಲಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಿ, ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ನಿರ್ಣಯಗಳು: ಐಎಂಎ ನಂತರ ನಕಲಿ ಕಂಪೆನಿಗಳು ಆಗಾಗ ತಲೆ ಎತ್ತುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಇಲ್ಲಿನ ವ್ಯವಸ್ಥೆ, ಸರಕಾರ ಮತ್ತು ರಾಜಕಾರಣಿಗಳು ಇಂತಹ ಪ್ರಕರಣಗಳನ್ನು ಮರುಕಳಿಸದಂತೆ ತಡೆಯುವಲ್ಲಿ ವಿಫಲರಾಗಿದ್ದಾರೆ. ಕೇಂದ್ರ-ರಾಜ್ಯ ಸರಕಾರಗಳ ಆರ್ಥಿಕ ಇಲಾಖೆ, ಗುಪ್ತಚರ ಇಲಾಖೆಯು ಈ ಸಂಸ್ಥೆಯ ಬಗ್ಗೆ ಮೊದಲೇ ಎಚ್ಚರ ವಹಿಸಿದ್ದರೆ ಅಗಾಧ ಗಾತ್ರದ ನಷ್ಟವನ್ನು ತಡೆಯಬಹುದಿತ್ತು ಎಂದು ಎಸ್‌ಡಿಪಿಐ ಅಭಿಪ್ರಾಯಪಟ್ಟಿದೆ. ಐಎಂಎ ಸಂಸ್ಥೆಯ ಎಲ್ಲ ಆಸ್ತಿಗಳನ್ನು ಪಾರದರ್ಶಕವಾಗಿ ಮುಟ್ಟುಗೋಳು ಹಾಕಿ ಕಾನೂನು ಬದ್ಧವಾಗಿ ವಿಲೇವಾರಿ ನಡೆಸಿ, ಬಡ ಹೂಡಿಕೆದಾರರ ಹಣವನ್ನು ಮುಂದಿನ ಎರಡು ತಿಂಗಳೊಳಗೆ ಮರಳಿಸಬೇಕು. ಕೆಲವು ಕೋಮುವಾದಿ ಮಾಧ್ಯಮಗಳು ಈ ಪ್ರಕರಣದಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಆರೋಪಿ ಸ್ಥಾನದಲ್ಲಿ ಬಿಂಬಿಸುವುದು ಸರಿಯಲ್ಲ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಎಸ್‌ಡಿಪಿಐ ಸರಕಾರವನ್ನು ಒತ್ತಾಯಿಸಿದೆ.

ಬಳ್ಳಾರಿಯ ಫಲವತ್ತಾದ ಸಾವಿರಾರು ಎಕರೆ ಸರಕಾರಿ ಭೂಮಿಯನ್ನು ಖಾಸಗಿ ಕಂಪೆನಿಯಾದ ಜಿಂದಾಲ್‌ಗೆ ನೀಡುವ ಕ್ರಮವನ್ನು ಎಸ್‌ಡಿಪಿಐ ತೀವ್ರವಾಗಿ ವಿರೋಧಿಸಿದೆ. ಇದನ್ನು ಕೂಡಲೇ ನ್ಯಾಯಾಂಗ ತನಿಖೆ ಮಾಡಿ ತಪ್ಪಿತಸ್ಥ ರಾಜಕೀಯ ಪಕ್ಷ ಮತ್ತು ನಾಯಕರ ಹೆಸರನ್ನು ಬಹಿರಂಗಪಡಿಸಬೇಕೆಂದು ಎಸ್‌ಡಿಪಿಐ ಆಗ್ರಹಿಸಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಕಬ್ಬೆಕಟ್ಟೆ ಹಳ್ಳಿಯಲ್ಲಿ ದಲಿತ ಯುವಕ ಪ್ರತಾಪ್ ಎಂಬವರ ಮೇಲೆ ಅಲ್ಲಿನ ನಿವಾಸಿಗಳು ದೈಹಿಕವಾಗಿ ಹಲ್ಲೆ ನಡೆಸಿದ್ದಲ್ಲದೆ ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿರುವುದು ಅತ್ಯಂತ ಅಮಾನವೀಯ ಕೃತ್ಯವಾಗಿದೆ. ಈ ಘಟನೆಯಿಂದ ರಾಜ್ಯವೇ ತಲೆ ತಗ್ಗಿಸುವಂತೆ ಮಾಡಿದೆ ಎಂದು ಎಸ್‌ಡಿಪಿಐ ಹೇಳಿದೆ. ಘಟನೆಗೆ ಕಾರಣರಾದ ಆರೋಪಿಗಳ ಮೇಲೆ ಮತ್ತು ಇದರ ಹಿಂದಿರುವ ಜಾತಿ ವೈಷಮ್ಯವನ್ನು ಹರಡಲು ಪ್ರಯತ್ನಿಸಿದ ಕಾಣದ ಕೈಗಳನ್ನು ತಕ್ಷಣ ಬಂಧಿಸಿ ಕಾನೂನು ಶಿಕ್ಷೆಗೊಳಪಡಿಸಬೇಕೆಂದು ಎಸ್‌ಡಿಪಿಐ ಸರಕಾರಕ್ಕೆ ಆಗ್ರಹಿಸಿದೆ.

ರಾಜ್ಯ ಸರಕಾರವು ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸಿರುವುದನ್ನು ಎಸ್‌ಡಿಪಿಐ ಸ್ವಾಗತಿಸಿದೆ. ಸರಕಾರ ಈ ನಿರ್ಧಾರದಿಂದ ಬಡವರ್ಗದ ಮಕ್ಕಳಿಗೂ ಆಂಗ್ಲ ಮಾಧ್ಯಮದಲ್ಲಿ ಉಚಿತ ಶಿಕ್ಷಣ ಪಡೆಯಲು ಅವಕಾಶ ದೊರೆತಂತಾಗಿದೆ. ಈ ಶಾಲೆಗಳಿಗೆ ನುರಿತ ಶಿಕ್ಷಕರು ಮತ್ತು ಎಲ್ಲ ಮೂಲಭೂತ ಸೌಕರ್ಯ ಸಿಗುವಂತೆ ಸರಕಾರ ಕ್ರಮ ಕೈಗೊಳ್ಳಬೇಕೆಂದು ಎಸ್‌ಡಿಪಿಐ ವಿನಂತಿಸಿದೆ. ಬಡವರಿಗೆ, ದಲಿತರಿಗೆ, ಮುಸ್ಲಿಮರಿಗೆ, ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಮತ್ತು ರೈತರ ಮಕ್ಕಳಿಗೆ ಈ ಶಾಲೆಗಳಲ್ಲಿ ಆದ್ಯತೆಯ ಮೇರೆಗೆ ಪ್ರವೇಶಾವಕಾಶ ನೀಡಬೇಕೆಂದು ಎಸ್‌ಡಿಪಿಐ ಒತ್ತಾಯಿಸಿದೆ.

ಸರಕಾರ ಕನ್ನಡ ಮಾಧ್ಯಮ ಮತ್ತು ಉರ್ದು ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸಲು ವಿಶೇಷ ಕಾಳಜಿ ವಹಿಸಬೇಕು. ಉತ್ತಮ ಗುಣಮಟ್ಟದ ಶಿಕ್ಷಣ ಕನ್ನಡ-ಉರ್ದು ಮಾಧ್ಯಮಗಳಲ್ಲೂ ಸಿಗಬೇಕು. ಉತ್ತಮ ಆಹಾರ, ಮೊಟ್ಟೆ, ಪಠ್ಯ ಪುಸ್ತಕ, ಸಮವಸ್ತ್ರ ಮತ್ತಿತರ ಶಾಲಾ ಉಪಯೋಗ ವಸ್ತುಗಳು ನಿಗದಿತ ಸಮಯದೊಳಗೆ ಉಚಿತವಾಗಿ ನೀಡಬೇಕೆಂದು ಎಸ್‌ಡಿಪಿಐ ಸರಕಾರವನ್ನು ಆಗ್ರಹಿಸಿದೆ.

ಸಭೆಯಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷೆ ಪ್ರೊ.ನಾಝ್ನೀನ್ ಬೇಗಂ, ರಾಜ್ಯ ಉಪಾಧ್ಯಕ್ಷರಾದ ದೇವನೂರು ಪುಟ್ಟನಂಜಯ್ಯ, ಅಡ್ವಕೇಟ್ ಮಜೀದ್ ಖಾನ್, ಪ್ರ.ಕಾರ್ಯದರ್ಶಿಗಳಾದ ಅಬ್ದುಲ್ ಹನ್ನಾನ್, ರಿಯಾಝ್ ಫರಂಗಿಪೇಟೆ, ಕಾರ್ಯದರ್ಶಿಗಳಾದ ಅಕ್ರಂ ಹಸನ್, ಅಫ್ಸರ್ ಕೊಡ್ಲಿಪೇಟೆ, ಅಶ್ರಫ್ ಮಾಚಾರ್, ಕುಮಾರಸ್ವಾಮಿ ಹಾಗೂ ರಾಜ್ಯ ಸಮಿತಿ ಸದಸ್ಯರು, ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News