ಹಜ್ ಯಾತ್ರೆಯ ನೀತಿ ನಿಯಮದ ತಿಳುವಳಿಕೆ ಅಗತ್ಯ: ಸಯ್ಯದ್ ಏಜಾಝ್ ಅಹ್ಮದ್

Update: 2019-06-17 16:06 GMT

ಧಾರವಾಡ, ಜೂ.17: ಇಸ್ಲಾಮ್ ಧರ್ಮದ ಐದು ಸಿದ್ಧಾಂತಗಳಲ್ಲಿ ಹಜ್ ಸಹ ಒಂದಾಗಿದೆ. ಇದು ಮುಸ್ಲಿಮರಿಗೆ ಜೀವನದಲ್ಲಿ ಒಂದು ಸಲ ನಿರ್ವಹಿಸುವುದು ಕಡ್ಡಾಯವಾಗಿದೆ. ಇಂತಹ ಯಾತ್ರೆ ಮಾಡುವಾಗ ಯಾತ್ರಿಕರು ಅಲ್ಲಿಯ ನೀತಿ ನಿಯಮ ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದು ರಾಜ್ಯ ಹಜ್ ಸಮಿತಿಯ ನೋಡಲ್ ಅಧಿಕಾರಿ ಸಯ್ಯದ್ ಎಜಾಝ್ ಅಹ್ಮದ್ ಹೇಳಿದ್ದಾರೆ.

ಸೋಮವಾರ ನಗರದ ಮಾಳಾಪೂರದ ಎ.ಪಿ.ಎಂ.ಸಿ ಯಾರ್ಡ್ ಹತ್ತಿರದ ಪಠಾಣ್ ಹಾಲ್‌ನಲ್ಲಿ ರಾಜ್ಯ ಹಜ್ ಸಮಿತಿ, ಇಂಡಿಯನ್ ಹಜ್ ಟ್ರೇನಿಂಗ್ ಪ್ರೋಗ್ರಾಮ್ ಹಾಗೂ ಧಾರವಾಡ ಜಿಲ್ಲಾ ಅಂಜುಮನ್ ಇಸ್ಲಾಮ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಒಂದು ದಿನದ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಶ್ವದಲ್ಲಿಯೇ ಹಜ್ ಅತ್ಯಂತ ದೊಡ್ಡ ಧಾರ್ಮಿಕ ಯಾತ್ರೆಯಾಗಿದೆ. ಅಲ್ಲಿ ಸಾಮಾನ್ಯ ಉಡುಗೆಯಲ್ಲಿ ಒಂದೇ ಸ್ಥಳದಲ್ಲಿ, ಸಾಮಾನ್ಯ ಪ್ರಾರ್ಥನೆ ಮಾಡುವ ಉದ್ದೇಶದಿಂದ ಲಕ್ಷಾಂತರ ಜನ ಸೇರುತ್ತಾರೆ. ವಿಶ್ವದಲ್ಲಿಯೇ ಅತಿ ಹೆಚ್ಚು ಹಜ್ ಯಾತ್ರಾರ್ಥಿಗಳನ್ನು ಕಳುಹಿಸುವ ಅಗ್ರ ಮೂರು ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ ಎಂದು ಅವರು ತಿಳಿಸಿದರು.

ಹಿಂದಿನ ದಿನಗಳಲ್ಲಿ ಹಜ್ ಯಾತ್ರೆ ವೇಳೆ ಬೆಂಕಿ ಘಟನೆಗಳು, ಕಾಲ್ತುಳಿತದಲ್ಲಿ ಅನೇಕ ಜೀವಗಳನ್ನು ಕಳೆದುಕೊಳ್ಳುವಂತೆ ಮಾಡಿದ್ದರಿಂದ ಸೌದಿ ಅರೇಬಿಯಾ ಸರಕಾರವು ಇದನ್ನು ತಡೆಗಟ್ಟುವದು ಅವಶ್ಯಕವೆಂದು ಭಾವಿಸಿ, ಬೇರೆ ಬೇರೆ ದೇಶಗಳಿಂದ ಹೊರಡುವ ಹಜ್ ಯಾತ್ರಾರ್ಥಿಗಳಿಗೆ ಸಂಪೂರ್ಣವಾಗಿ ತರಬೇತಿ ನೀಡಲು ಪ್ರತಿ ರಾಷ್ಟ್ರವನ್ನು ವಿನಂತಿಸಿದೆ ಎಂದು ಏಜಾಝ್ ಅಹ್ಮದ್ ಹೇಳಿದರು.

ಈ ಹಿನ್ನೆಲೆಯಲ್ಲಿ ಹಜ್ ಯಾತ್ರಿಕರಿಗೆ ತಮ್ಮ ಪ್ರಯಾಣ ಆರಾಮದಾಯಕ ಸುಖಕರ, ಸುಲಭವಾಗಿಸುವ ದೃಷ್ಟಿಕೋನದಿಂದ ಈ ತರಬೇತಿ ನೀಡುವಂತೆ ಕೇಂದ್ರ ಸರಕಾರವು ಎಲ್ಲ ರಾಜ್ಯ ಹಜ್ ಸಮಿತಿಗಳಿಗೆ, ಭಾರತೀಯ ಹಜ್ ಸಮಿತಿ ಮೂಲಕ ಸೂಚಿಸಿದೆ ಎಂದು ಅವರು ತಿಳಿಸಿದರು.

ಸಮುದಾಯದ ಮುಖಂಡ ಇಮ್ರಾನ್ ಕಳ್ಳಿಮನಿ ಮಾತನಾಡಿ, ಹಜ್ ಪ್ರಯಾಣದ ಬ್ಯಾಗೇಜ್ ಪ್ಯಾಕಿಂಗ್ ಕೇವಲ 45 ಕಿ.ಲೋ.ಗೆ ಸೀಮಿತವಾಗಿದೆ. ಹೀಗಾಗಿ ಪ್ರಯಾಣಿಕರು ಕೇವಲ ಎರಡು ಸೂಟ್‌ಕೇಸ್‌ಗಳನ್ನು ಮಾತ್ರ ಕೊಂಡೊಯ್ಯಬೇಕು ಎಂದರು.

ಅಲ್ಲದೆ, ಬೆಂಗಳೂರಿನ ಹಜ್ ಭವನ, ಅಂತರ್‌ರಾಷ್ಟ್ರೀಯ ಪ್ರವಾಸ, ಜಿದ್ದಾ ಮತ್ತು ಮದೀನಾ ವಿಮಾನ ನಿಲ್ದಾಣಗಳ ಔಪಚಾರಿಕತೆಗಳು, ಮಕ್ಕಾ ಮತ್ತು ಮದೀನಾದಲ್ಲಿ ಊಟ ಮತ್ತು ವಸತಿ ಸೌಕರ್ಯ, ಬಸ್, ರೈಲುಗಳಲ್ಲಿ ಪ್ರಯಾಣಿಸುವುದರ ಕುರಿತು ಅವರು ಮಾಹಿತಿ ನೀಡಿದರು.

ಈ ತರಬೇತಿ ಕಾರ್ಯಕ್ರಮದಲ್ಲಿ ಧಾರ್ಮಿಕ ವಿದ್ವಾಂಸರಾದ ಮೌಲಾನ ಮುಪ್ತುಲ್ಲಾ ಮಝರ್ ರಶಾದಿ, ಸಂಚಾಲಕ ಮುಬೀನ್ ಅಹ್ಮದ್, ಎಂ.ಎಂ.ಶಹಾ ಖಾದ್ರಿ, ಮುಹಮ್ಮದ್ ಅಶ್ರಫ್ ಅವರು ಹಜ್ ಆಚರಣೆ, ಕುರ್ಬಾನಿ ಮತ್ತು ಮದಿನಾಗೆ ಭೇಟಿ ಮಾಡುವುದು ಸೇರಿದಂತೆ ಪ್ರಮುಖವಾದ ಸಂಗತಿಗಳ ಬಗ್ಗೆ ಉಪನ್ಯಾಸ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News