ಪರಿಸರ ಸಂರಕ್ಷಣೆ ವಿಷಯದಲ್ಲಿ ರಾಜಿ ಮಾಡಿಕೊಳ್ಳಬೇಡಿ: ಡಾ.ತ್ರಿಲೋಚನ್ ಮಹಾಪಾತ್ರ

Update: 2019-06-17 16:13 GMT

ಧಾರವಾಡ, ಜೂ.17: ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ನಾವೆಲ್ಲ ಯಾವುದೇ ರಾಜಿ ಮಾಡಿಕೊಳ್ಳದೇ ಕಾರ್ಯನಿರ್ವಹಿಸಬೇಕು. ಕೃಷಿ ಹಾಗೂ ಹೈನುಗಾರಿಕೆ ಉತ್ಪನ್ನಗಳ ಪ್ರಮಾಣ ಹೆಚ್ಚಿಸಲು ಪ್ರತಿಭಾವಂತ ಕೃಷಿ ವಿಜ್ಞಾನಿಗಳು, ಹೊಸ ಅನ್ವೇಷಣೆಗಳು ಕೈಗೊಳ್ಳಬೇಕು ಎಂದು ಭಾರತ ಸರಕಾರದ ಕೃಷಿ ಸಂಶೋಧನೆ ಹಾಗೂ ಶಿಕ್ಷಣ ವಿಭಾಗದ ಕಾರ್ಯದರ್ಶಿ ಮತ್ತು ದಿಲ್ಲಿಯ ಕೃಷಿ ಅನುಸಂಧಾನ ಪರಿಷತ್‌ನ ಮಹಾನಿರ್ದೇಶಕ ಡಾ.ತ್ರಿಲೋಚನ್ ಮಹಾಪಾತ್ರ ಹೇಳಿದ್ದಾರೆ.

ಸೋಮವಾರ ನಗರದ ಕೃಷಿ ವಿಶ್ವವಿದ್ಯಾಲಯದ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ 32ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಘಟಿಕೋತ್ಸವ ಭಾಷಣ ಮಾಡಿದರು.

ಬಹು ಮಾದರಿ ಕೃಷಿ ಹಾಗೂ ಉಪ ಕಸುಬುಗಳು ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತವೆ. ಕುಸಿಯುತ್ತಿರುವ ಅಂತರ್ಜಲ ಹೆಚ್ಚಿಸಲು ಹೊಸ-ಹೊಸ ಸಂಶೋಧನೆ ನಡೆದು ಅನುಷ್ಠಾನಕ್ಕೆ ಬರಬೇಕು ಎಂದು ಅವರು ಹೇಳಿದರು.

ಎಲ್ಲ ಕೃಷಿ ವಿಜ್ಞಾನಿಗಳು ಒಗಟ್ಟಿನಿಂದ ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ಉತ್ತಮ ಪಡಿಸಬೇಕು, ಅವುಗಳಲ್ಲಿ ಮಾರುಕಟ್ಟೆಗಳ ವ್ಯವಸ್ಥೆ ಹೆಚ್ಚಾಗಬೇಕು, ನಮ್ಮಲ್ಲಿ ಸಾಕಷ್ಟು ಮಾನವ ಸಂಪನ್ಮೂಲಗಳಿವೆ. ಕೋಯ್ಲೋತ್ತರ ಕೃಷಿ ಚಟುವಟಿಕೆಗಳಿಗೆ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ತ್ರಿಲೋಚನ್ ಮಹಾಪಾತ್ರ ತಿಳಿಸಿದರು.

2017 ರಲ್ಲಿ ಧಾರವಾಡ ಕೃಷಿ ವಿವಿಗೆ ದೇಶದ ಉತ್ತಮ ಕೃಷಿ ವಿವಿ ಎಂಬ ಪ್ರಶಸ್ತಿ ಬಂದಿದೆ. ಇಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ದೇಶದ ರೈತರಿಗೆ ಒಳಿತು ಮಾಡುವ ಸಂಶೋಧನೆಗಳು ಪರಿಣಾಮಕಾರಿಯಾಗಿ ನಡೆಯಬೇಕು ಎಂದು ಅವರು ಕರೆ ನೀಡಿದರು.

ಇಂದು ಪದವಿಗಳನ್ನು ಪಡೆದ ಯುವ ಕೃಷಿ ತಜ್ಞರು ತಮ್ಮ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬೇಕು. ವಿಶೇಷವಾಗಿ ಕೃಷಿಕರಿಗೆ ನೆರವಾಗುವ ನಿಟ್ಟಿನಲ್ಲಿ ಹೊಸ ಆಲೋಚನೆಗಳಿಗೆ, ಸಂಶೋಧನೆಗಳಿಗೆ ಒತ್ತು ನೀಡಬೇಕು ಎಂದು ತ್ರಿಲೋಚನ್ ಮಹಾಪಾತ್ರ ಹೇಳಿದರು.

ಕೃಷಿ ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವದಲ್ಲಿ 632 ಸ್ನಾತಕ ಪದವಿಗಳು, 321 ಸ್ನಾತಕೋತ್ತರ ಪದವಿಗಳನ್ನು ಹಾಗೂ 76 ಪಿಎಚ್‌ಡಿ ಪದವಿಗಳನ್ನು ಹಾಗೂ 43 ಸ್ವರ್ಣ ಪದಕಗಳನ್ನು ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಹಾಗೂ ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಪ್ರದಾನ ಮಾಡಿದರು.

ಸ್ನಾತಕ ಪದವಿಯಲ್ಲಿ ಅತ್ಯಧಿಕ ಅಂಕಗಳಿಸಿರುವ ಸಿದ್ದು ಬಸವರಾಜ ಚಿಂದಿ ಅತಿಹೆಚ್ಚು ಚಿನ್ನದ ಪದಕಗಳನ್ನುಗಳಿಸಿ ಬಂಗಾರದ ಹುಡುಗನಾಗಿ ಹೊರಹೊಮ್ಮಿದರು. ವಿವಿಧ ಪದವಿಗಳು ಮತ್ತು ಪಿಎಚ್‌ಡಿಗೆ ಭಾಜನರಾದದವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದ ಶಿವಶಂಕರರೆಡ್ಡಿ, ಪದವಿಗಳ ಘನತೆಗೆ ತಕ್ಕಂತೆ ವರ್ತಿಸುವಂತೆ ಸಲಹೆ ನೀಡಿದರು.

ಸ್ನಾತಕ ಪದವಿಗಳಲ್ಲಿ ಅಜಯಕುಮಾರ್, ನಿಖಿತಾ ಮಾರುತಿ ಭೋವಿ, ಹರೀಶ್, ವರುಣ ಅರಸ್, ಅನುಷಾ ಸ್ವರ್ಣ ಪದಕಗಳನ್ನು, ಮಾನಸಾ ರಾಮನಾಥ ಹೆಗಡೆ, ಪ್ರಿಯಾಂಕ ಸಿ.ಹೊನ್ನಳ್ಳಿ ನಗದು ಪುರಸ್ಕಾರ ಪಡೆದರು.

ವಿಶ್ವವಿದ್ಯಾಲಯದ ಕುಲಪತಿ ಡಾ.ಮಹದೇವ ಬಿ.ಚೆಟ್ಟಿ ವಾರ್ಷಿಕ ವರದಿ ವಾಚಿಸಿ, ವಿವಿಯ ಸಾಧನೆಗಳನ್ನು ವಿವರಿಸಿದರು. ಶಾಸಕ ಪ್ರಸಾದ್ ಅಬ್ಬಯ್ಯ, ಕುಲಸಚಿವ ಪಿ.ಯು.ಕೃಷ್ಣರಾಜ, ಸಂಶೋಧನಾ ನಿರ್ದೇಶಕ ಡಾ.ಎಚ್.ಎಲ್.ನದಾಫ್, ವಿಸ್ತರಣಾ ನಿರ್ದೇಶಕ ಎಚ್.ವೆಂಕಟೇಶ್, ಆಡಳಿತ ಮಂಡಳಿಯ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News