ಜಾತಿ ರಾಜಕಾರಣದಲ್ಲಿ ತೊಡಗಿರುವ ರೇವಣ್ಣ ರಾಜೀನಾಮೆ ನೀಡಲಿ: ಮಾವಳ್ಳಿ ಶಂಕರ್ ಆಗ್ರಹ

Update: 2019-06-17 16:55 GMT

ಬೆಂಗಳೂರು, ಜೂ.17: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಔಷಧ ನಿಯಂತ್ರಣ ಇಲಾಖೆ ಮತ್ತು ಆಯುಷ್ ಇಲಾಖೆಯಲ್ಲಿ ಇಲ್ಲಿಯವರೆಗೂ ಗ್ರೂಪ್ ‘ಎ’ ವೃಂದದ ಅಧಿಕಾರಿಗಳಿಗೆ ಹಿಂಭಡ್ತಿ ಆದೇಶವನ್ನು ರದ್ದುಪಡಿಸದೇ ಕರ್ತವ್ಯ ಲೋಪವೆಸಗುತ್ತಿರುವ ಅಧಿಕಾರಿಗಳ ವಿರುದ್ಧ ಸರಕಾರ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿ ಒಕ್ಕೂಟದ ರಾಜ್ಯಾಧ್ಯಕ್ಷ ಮಾವಳ್ಳಿ ಶಂಕರ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಮೇ 10 ರಂದು ಭಡ್ತಿ ಮೀಸಲಾತಿಯನ್ನು ಜಟಿಲಗೊಳಿಸಿ ಸಕಾಲಿಕ ಎಚ್ಚರಿಕೆ ನೀಡಿದ್ದರೂ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳದೆ ಹಳೆ ಚಾಳಿಯನ್ನೇ ಮುಂದುವರೆಸಿದ್ದಾರೆ. ಅಲ್ಲದೆ ನೌಕರರಿಗೆ ಹಿಂಭಡ್ತಿ ಪೂರ್ವದಲ್ಲಿದ್ದ ಸ್ಥಾನಕ್ಕೆ ಮರು ನಿಯುಕ್ತಿಗೊಳಿಸಲು ಸರಕಾರ ವಿಫಲವಾಗಿದೆ. ಭಡ್ತಿ ಮೀಸಲಾತಿ ಕಾಯಿದೆಯ ಲಾನುಭವಿ ನೌಕರರಿಗೆ ಜೇಷ್ಠತೆ ನಿಗದಿ, ಮುಂಭಡ್ತಿ, ವೇತನ ನಿಗದಿಪಡಿಸುವುದು ಸೇರಿದಂತೆ ನಿವೃತ್ತಿ ಹೊಂದುವವರಿಗೆ ಪಿಂಚಣಿ ಸೌಲಭ್ಯ ಒದಗಿಸುವ ಎಲ್ಲಾ ಪ್ರಕ್ರಿಯೆಗಳಿಂದ ಎಸ್‌ಸಿ, ಎಸ್‌ಟಿ ನೌಕರರು ಆತಂಕಕ್ಕೆ ಒಳಗಾಗಿದ್ದಾರೆ. ಇದಕ್ಕೆಲ್ಲಾ ಸೂತ್ರದಾರ ಎಚ್.ಡಿ.ರೇವಣ್ಣ ಎಂದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.

ಲೋಕೋಪಯೋಗಿ ಇಲಾಖೆಯಲ್ಲಿ ಇಬ್ಬರು ಕಾರ್ಯಪಾಲಕ ಅಭಿಯಂತರರಿಗೆ ಅವಕಾಶ ನೀಡಿ ಉಳಿದ 215 ಕಾರ್ಯಪಾಲಕ ಅಭಿಯಂತರರನ್ನು ಬೇರೆಬೇರೆ ಇಲಾಖೆಗಳಿಗೆ ಹಂಚಿಕೆ ಮಾಡಿದ್ದಾರೆ. ಪಿಡಬ್ಲೂಡಿ ಇಲಾಖೆ ನಿಮ್ಮ ಪಿತ್ರಾರ್ಜಿತ ಆಸ್ತಿಯಲ್ಲ ಇಬ್ಬರಿಗೆ ಮಾತ್ರ ಸ್ಥಾನ ನೀಡಿ ಇನ್ನುಳಿದವರನ್ನು ಬೇರೆ ಇಲಾಖೆಗೆ ಕಳಿಸುವುದಕ್ಕೆ ಎಂದು ಕಿಡಿಕಾರಿದ ಅವರು, ಜಾತಿ ರಾಜಕೀಯದಲ್ಲಿ ತೊಡಗಿರುವ ರೇವಣ್ಣ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಸಂವಿಧಾನ ವಿರೋಧ ಅಹಿಂಸಾ ಸಂಘಟನೆಯ ಜಾತಿವಾದಿ ಬೇಡಿಕೆಗಳಿಗೆ ಸ್ಪಂದಿಸುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಧೋರಣೆ ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ. ಮುಖ್ಯಮಂತ್ರಿಗಳು ತಮ್ಮ ಆದೇಶಕ್ಕೆ ತಕ್ಕಂತೆ ಕಾರ್ಯೋನ್ಮುಖರಾಗಗದಿದ್ದರೆ ಸೂಕ್ತ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News