ಜಿಂದಾಲ್ ಗೆ ಭೂಮಿ ಹಂಚಿಕೆ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯ ನನಗಿಲ್ಲ: ಬಿ.ಎಸ್.ಯಡಿಯೂರಪ್ಪ

Update: 2019-06-17 17:35 GMT

ಮೈಸೂರು,ಜೂ.17: ಜಿಂದಾಲ್ ಕಂಪನಿಗೆ ಭೂಮಿ ಹಂಚುವ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯ ನನಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ.

ಮೈಸೂರಿನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಜಿಂದಾಲ್‍ಗೆ ಭೂಮಿ ಪರಾಭಾರೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ, ಕೈಗೊಳ್ಳುವುದೂ ಇಲ್ಲ. ಈ ಹಿನ್ನೆಲೆಯಲ್ಲಿ ನಾವು ಹೋರಾಟ ರೂಪಿಸಿದ್ದೆವು. ನಾನು ಧರಣಿ ಮಾಡುವುದು ವಾರದ ಹಿಂದೆಯೇ ಮುಖ್ಯಮಂತ್ರಿಯವರಿಗೆ ಗೊತ್ತಿತ್ತು. ಆಗಲೇ ಮಾತುಕತೆಗೆ ಕರೆಯಬಹುದಿತ್ತು. ಆದರೆ ನಾವು ಅಹೋರಾತ್ರಿ ಧರಣಿ ಮುಗಿಸಿ ಮೆರವಣಿಗೆ ಹೊರಡುವ ಹೊತ್ತಿಗೆ ಸಿಎಂ ಪತ್ರ ಬರೆದಿದ್ದಾರೆ. ಯಡಿಯೂರಪ್ಪ ಸಹಕಾರ ಕೊಡಲಿಲ್ಲ. ರಾಜಕೀಯ ಮಾಡುತ್ತಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಜಿಂದಾಲ್‍ನಂತಹ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯ ನನಗಿಲ್ಲ. ನನಗೆ ರಾಜ್ಯದ ಒಳಿತು ಮಾತ್ರ ಮುಖ್ಯ ಎಂದರು.

ಸಿಎಂ ಶಾಲಾ ವಾಸ್ತವ್ಯಕ್ಕೆ ಬೇಸರ ವ್ಯಕ್ತಪಡಿಸಿದ ಅವರು ಮುಖ್ಯಮಂತ್ರಿಗಳೇ, ಗ್ರಾಮ ವಾಸ್ತವ್ಯದ ನಾಟಕ ನಿಲ್ಲಿಸಿ ಶೇಕಡ 80ರಷ್ಟು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಮೈಸೂರು, ಚಾಮರಾಜನಗರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆಯಿದೆ. ರಾಜ್ಯಾದ್ಯಂತ ತೀವ್ರ ಬರಗಾಲವಿದೆ. ಗ್ರಾಮ ವಾಸ್ತವ್ಯ ಮಾಡುವ ಬದಲು ಬರ ಪರಿಸ್ಥಿತಿ ನಿರ್ವಹಿಸುವ ಬಗ್ಗೆ ಗಮನ ಕೊಡಿ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಮಾನಿಟರ್ ಮಾಡಿ ಎಂದು ಸಿಎಂಗೆ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಸಲಹೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News