ಯೋಗ ಕ್ಷೇತ್ರದಲ್ಲಿ ಸಾಧನೆ ಹಾದಿಯಲ್ಲಿ ಅಲ್ತಾಫ್ ಹುಸೇನ್

Update: 2019-06-17 17:48 GMT

ಮೂಡಿಗೆರೆ, ಜೂ.17: ಸಾಧನೆಗಳು ಅಂತಸ್ತು, ಜಾತಿ, ಧರ್ಮಾತೀತವಾದವು ಎಂಬ ಮಾತೆನಂತೆ ಮುಸ್ಲಿಮ್ ಸಮುದಾಯದ ವ್ಯಕ್ತಿಯೊಬ್ಬರು ಯೋಗ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಗೈಯ್ಯುವ ಮೂಲಕ ಸಾವಿರಾರು ಅನುಯಾಯಿಗಳನ್ನು ಗಳಿಸಿದ್ದು, ತಾಲೂಕಿನ ಕೀರ್ತಿಯನ್ನು ನಾಡಿನಾದ್ಯಂತ ಪಸರಿಸುತ್ತಿದ್ದಾರೆ. 

ಪಟ್ಟಣ ಸೈಯ್ಯದ್ ಅಲ್ತಾಫ್ ಹುಸೇನ್ ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮುದಾಯದ ಅಪರೂಪದ ವ್ಯಕ್ತಿಯಾಗಿದ್ದು, ಯೋಗವೆಂದರೆ ಮನಬಂದಂತೆ ವ್ಯಾಯಾಮ ಮಾಡುವುದಲ್ಲ. ನಿರಂತರ ಅಭ್ಯಾಸದಿಂದ ಮಾತ್ರ ಯೋಗದ ಕಲೆಯನ್ನು ಕರಗತ ಮಾಡಿಕೊಳ್ಳಬಹುದು ಎನ್ನುತ್ತಾರೆ ಯೋಗಲೋಕದಲ್ಲಿ ಪಳಗಿರುವ ಮೂಡಿಗೆರೆಯ ಅಲ್ತಾಫ್ ಹುಸೇನ್. 

ಮುಸ್ಲಿಂ ಸಮುದಾಯದವರಲ್ಲಿ ಯೋಗ ಮಾಡುವವರು ಅತೀ ವಿರಳ. ಅಲ್ತಾಫ್ ಹುಸೇನ್ ಅವರು ಪ್ರತೀದಿನ ಮುಂಜಾನೆ ಎದ್ದು ನಮಾಝ್‍ಗೆ ಹೋಗುವ ಮೊದಲು ಯೋಗ ಮಾಡುತ್ತಾರೆ. ಇವರು ಯೊಗ ಕಲಿತದ್ದು, ಇವತ್ತು ನಿನ್ನೆಯೇನಲ್ಲ. 1988ರಲ್ಲೇ ಯೋಗ ತರಬೇತಿ ಪಡೆದಿದ್ದಾರೆ. ಕಳೆದ 2004ರಲ್ಲಿ ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದಲ್ಲಿ ಯೋಗ ಇನ್ಸ್ಟ್ರಕ್ಟರ್ ಕೋರ್ಸ್ (ವೈಐಸಿ) ಮಾಡಿದ್ದಾರೆ. 2005ರಲ್ಲಿ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯದಲ್ಲಿ ತರಬೇತಿ ಪಡೆದಿದ್ದಾರೆ. ಅಲ್ಲದೆ ಮೈಸೂರಿನ 'ಅಂತರಾಷ್ಟ್ರೀಯ ಒಕಿನವ ಸ್ಕೂಲ್ ಆಫ್ ಕರಾಟೆ'ಯಲ್ಲಿ ಪ್ರಶಸ್ತಿ ಪಡೆದಿದ್ದಾರೆ.  

ಹಾಗೆಯೇ ನಿಯಮ ಬದ್ಧವಾದ ಯೋಗ ಪ್ರದರ್ಶನದೊಂದಿಗೆ ಜೆಸಿಐ ಸಹಿತ ವಿವಿಧ ಸಂಘ ಸಂಸ್ಥೆಗಳಲ್ಲಿ ಸ್ವತಃ ಶಿಬಿರಗಳ ಮೂಲಕ ಯೋಗಾಸಕ್ತರಿಗೆ ತರಬೇತಿ ನೀಡಿರುತ್ತಾರೆ. ಅನೇಕ ಪ್ರಶಸ್ತಿಗಳನ್ನೂ ಪಡೆದಿದ್ದು, ಯೋಗದ ಬಗ್ಗೆ ಅಪಾರ ಜ್ಞಾನವುಳ್ಳವರಾಗಿದ್ದಾರೆ ಅಲ್ತಾಫ್. ಅನೇಕ ಮಂದಿ ಇವರಿಂದ ಯೋಗಾಭ್ಯಾಸ ಕಲಿತವರಿದ್ದಾರೆ. ಪಟ್ಟಣದ ಜೆ.ಎಂ.ರಸ್ತೆಯಲ್ಲಿ ಕಳೆದ 25 ವರ್ಷಗಳಿಂದ ಕೋಳಿಮಾಂಸದ ವ್ಯಾಪಾರ ವೃತ್ತಿಯಲ್ಲಿರುವ ಅಲ್ತಾಫ್ ಹುಸೇನ್ ಹಲವು ವರ್ಷಗಳಿಂದ ಸ್ಥಳೀಯವಾಗಿ ರಾಜಕೀಯದಲ್ಲಿ ಗುರುತಿಸಿಕೊಂಡವರು. ಪಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರೂ ಹೌದು. 

ಜಿಮ್‍ನೊಂದಿಗೆ ಯೋಗಶಾಲೆ ನಡೆಸಲು ಸಿದ್ಧತೆ: ಆರೋಗ್ಯವೇ ಭಾಗ್ಯವೆಂಬ ಅರಿವು ಅಲ್ತಾಫ್ ಅವರಿಗೆ ಇದ್ದಿದ್ದರಿಂದಲೇ ಸ್ಥಳೀಯರಿಗೆ ಅನುಕೂಲವಾಗುವಂತೆ ಕಳೆದ 2016ರಲ್ಲಿ ಮೂಡಿಗೆರೆಯಲ್ಲಿ ಪ್ರಪ್ರಥಮ ಬಾರಿಗೆ ರಾಯಲ್ ಮಲ್ಟಿ ಜಿಮ್ (ವ್ಯಾಯಾಮ ಶಾಲೆ) ಆರಂಭಿಸಿದರು. ಇದು ಯಶಸ್ವಿಯಾಗಿ ಮುಂದುವರಿದಿದೆ. ಮುಂದಿನ ಜುಲೈ 1ರಿಂದ ರಾಯಲ್ ಲೇಡಿಸ್ ಫಿಟ್‍ನೆಸ್ ಸೆಂಟರ್ ಹಾಗೂ ಯೋಗ ತರಬೇತಿ ಕೇಂದ್ರ ತೆರೆಯಲು ಸಿದ್ಧತೆ ನಡೆಸುತ್ತಿದ್ದಾರೆ

ಯಾವುದೇ ವ್ಯಕ್ತಿ ತನ್ನಲ್ಲಿರುವ ಅಸಾಧಾರಣ ಶಕ್ತಿಯನ್ನು ಸದುಪಯೋಗಪಡಿಸಿಕೊಂಡಲ್ಲಿ ಅದ್ಭುತ ಸಾಧನೆ ಮಾಡಬಲ್ಲವನಾಗಿರುತ್ತಾನೆ. ಯೋಗಕ್ಕೆ ಜ್ಞಾನ ಮತ್ತು ಆರೋಗ್ಯವನ್ನು ಹೆಚ್ಚಿಸಬಲ್ಲ ಅದ್ಭುತ ಶಕ್ತಿಯಿದೆ. ಯೋಗವನ್ನು ಕರಗತ ಮಾಡಿಕೊಂಡ ಅನೇಕ ಮಂದಿ ನಮಗೆ ಕಾಣಸಿಗುತ್ತಾರೆ. ಧರ್ಮಾತೀತವಾಗಿ ಯೋಗ ಕಲಿತವರಿದ್ದಾರೆ. ಸೌದಿ ಅರೇಬಿಯಾದಲ್ಲಿ  ನೌಫ್‍ಅಲ್ ಮರವಾಯಿ ಎಂಬ ಮಹಿಳೆ ಸಾವಿರಾರು ಯೋಗ ಅನುಯಾಯಿಗಳನ್ನು ಹೊಂದಿರುವುದು ಅಚ್ಚರಿಯ ಸಂಗತಿಯಾಗಿದೆ.       

ಆರೋಗ್ಯವಂತ ಮನುಷ್ಯನೇ ನಿಜವಾದ ಭಾಗ್ಯವಂತ. ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯವಿಲ್ಲ. ದೈಹಿಕ ಹಾಗೂ  ಮಾನಸಿಕ ಆರೋಗ್ಯವಂತನು ಶಾಂತನೂ, ತೃಪ್ತನೂ ಆಗಿರುತ್ತಾನೆ. ಇದಕ್ಕಾಗಿ ಪ್ರತಿಯೊಬ್ಬರೂ ದೇಹಕ್ಕೆ ಸಹಜವಾಗಿ ಅನುಕೂಲವಾಗಬಲ್ಲ ಆಹಾರಗಳನ್ನು ಸೇವಿಸಬೇಕು. ಹಾಗೂ ಯೋಗ, ಧ್ಯಾನ ಮಾಡಬೇಕು. ಆಧುನಿಕ ಜೀವನದಲ್ಲಿ ಬಾಹ್ಯವಾಗಿ ದೊರಕುವ ಲೌಕಿಕ ಆನಂದ ನೀಡುವ ಸಾಧನಗಳು ಅಪಾರವಾಗಿವೆ. ಈ ಆಕರ್ಷಣೆಗೊಳಗುವ ಭೌತಿಕ ಸುಖ, ಅನೇಕ ರೀತಿಯ ವಿಷ ಮತ್ತು ದೋಷಗಳನ್ನು ಮೈಗಂಟಿಸಿಕೊಳ್ಳಬಾರದು.

-ಅಪ್ತಾಫ್ ಹುಸೇನ್, ಯೋಗಪಟು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News