ಅಭಿವೃದ್ಧಿ ಕಡೆಗಣಿಸಿದರೆ ಸಂಸದೆ ಶೋಭಾ ವಿರುದ್ಧ ನಿರಂತರ ಹೋರಾಟ: ಜೆಡಿಎಸ್ ರಾಜ್ಯ ಉಪಾಧ್ಯಕ್ಷ ದೇವರಾಜ್

Update: 2019-06-17 18:06 GMT

ಚಿಕ್ಕಮಗಳೂರು, ಜೂ.17: ಸಂಸದೆ ಶೋಭಾ ಕರಂದ್ಲಾಜೆ ಅವರು ಕಳೆದ ಬಾರಿ ಜಿಲ್ಲೆಯ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದ್ದಾರೆ. ಈ ಬಾರಿಯಾದರೂ ಅವರು ಜಿಲ್ಲೆಗೆ ಹೊಸ ಹೊಸ ಯೋಜನೆಗಳನ್ನು ತರುವ ಪ್ರಯತ್ನ ಮಾಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ತಿಳಿಸಿದರು.

ಸೋಮವಾರ ನಗರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಸಂಸದರ ಸಾಧನೆ ಶೂನ್ಯ. ಕಳೆದ ಬಾರಿಯಂತೆ ಈ ಬಾರಿಯೂ ಜಿಲ್ಲೆಯ ಅಭಿವೃದ್ಧಿ ಕಾರ್ಯ ಮರೆತು ಹಳೇ ಚಾಳಿ ಮುಂದೂವರೆಸಿದರೆ ಅವರ ವಿರುದ್ಧ ನಿರಂತರ ಹೋರಾಟ ಮಾಡಲಾಗುವುದು ಎಂದ ಅವರು, ಕಳೆದ ಐದು ವರ್ಷದಲ್ಲಿ ಅನುಧಾನ ಬಳಕೆ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಜಿಲ್ಲೆಗೆ ಯಾವುದೇ ಯೋಜನೆ ಜಾರಿ ಮಾಡಲಿಲ್ಲ. ಈ ಬಾರಿಯಾದರು ಜಿಲ್ಲೆಗೆ ಹೊಸ ಯೋಜನೆ ತರುವ ಪ್ರಯತ್ನ ಮಾಡಲಿ. ಇನ್ನೊಂದು ತಿಂಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಕಾರ್ಯಪ್ರವೃತ್ತರಾಗಬೇಕು ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಕಾಫಿ ಬೆಳೆಯೂ ವಾಣಿಜ್ಯ ಬೆಳೆಯಾಗಿದ್ದು ಅದು ಕೇಂದ್ರ ಸರಕಾರದ ವ್ಯಾಪ್ತಿಗೆ ಬರುತ್ತದೆ. ಕಾಫಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರಕಾರಕ್ಕೆ ನಿಯೋಗ ಹೋಗುವುದಾಗಿ ಸಂಸದರು ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಎಂದು ಶೋಭಾ ಅವರು ಕಾಫಿ ಬೆಳೆಗಾರರ ಸಭೆಯಲ್ಲಿ ಇತ್ತೀಚೆಗೆ ಹೇಳಿಕೆ ವಿರುದ್ಧ ದೇವರಾಜ್ ಇದೇ ವೇಳೆ ತಿರುಗೇಟು ನೀಡಿದರು.

ಸಾಲಮನ್ನಾ ಯೋಜನೆ, ಹುಲಿಯೋಜನೆ, ಕಸ್ತೂರಿ ರಂಗನ್ ವರದಿ, ಅರಣ್ಯ ಭೂಮಿ ಒತ್ತುವರಿ ಮುಂತಾದ ಸಮಸ್ಯೆಗಳನ್ನು ಕೇಂದ್ರ ಸರಕಾರ ಬಗೆಹರಿಸಬೇಕು. ಕೇಂದ್ರ ಸರಕಾರದ ಮುಂದೆ ನಿಯೋಗ ಕರೆದ್ಯೋಯುವುದನ್ನು ಬಿಟ್ಟು ರಾಜ್ಯ ಸರಕಾರದ ಮುಂದೆ ನಿಯೋಗ ಹೋಗುವುದಾಗಿ ಹೇಳಿಕೆ ನೀಡುವ ಮೂಲಕ ಬೆಳೆಗಾರರು ಮತ್ತು ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದ ಅವರು, ಜಿಲ್ಲೆಯಲ್ಲಿ ಅಡಿಕೆ, ಕಾಫಿ, ತೆಂಗು, ವಾಣಿಜ್ಯ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರದ ಗಮನ ಸೆಳೆದು ಕೃಷಿ ಮತ್ತು ವಾಣಿಜ್ಯ ಸಚಿವರ ಜೊತೆ ಚರ್ಚಿಸಿ ಬೆಳೆಗಾರರ ಸಾಲಮನ್ನಾ ಮಾಡಿಸಬೇಕು ಮತ್ತು ಜಿಲ್ಲೆಗೆ ಉದ್ಯೋಗ ಆಧಾರಿತ ಯೋಜನೆಗಳನ್ನು ತರಬೇಕು ಎಂದು ಮನವಿ ಮಾಡಿದರು. 

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಚಂದ್ರಪ್ಪ, ಜಮೀಲ್ ಅಹ್ಮದ್, ಮಂಜಪ್ಪ, ರಂಜಿತ್, ಆನಂದೇಗೌಡ, ಜಯರಾಜ್ ಅರಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News