ನೀರು ಬಿಡುಗಡೆಗೆ ಒತ್ತಾಯಿಸಿ ರೈತ ಸಂಘ ಪ್ರತಿಭಟನೆ

Update: 2019-06-17 18:18 GMT

ಮಂಡ್ಯ, ಜೂ.17: ನಾಲೆಗಳಿಗೆ ನೀರು ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತಸಂಘದ (ಮೂಲ ಸಂಘಟನೆ) ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಜಿಲ್ಲಾಧಿಕಾರಿ ಅವರ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ ಅವರು, ಕೂಡಲೇ ತಮ್ಮ ಬೇಡಿಕೆಗೆ ಸ್ಪಂದಿಸಬೇಕೆಂದರು. ಬೆಳೆದಿರುವ ಕಬ್ಬು, ರೇಷ್ಮೆ, ತೆಂಗು ಇತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಕೂಡಲೇ ಕೃಷ್ಣರಾಜಸಾಗರ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

2018-19ನೇ ಸಾಲಿನಲ್ಲಿ ಕಾರ್ಖಾನೆಗಳಿ ಸರಬರಾಜು ಮಾಡಿರುವ ಕಬ್ಬಿನ ಬಾಕಿಯನ್ನು ಬಿಡುಗಡೆಗೊಳಿಸಬೇಕು. ಹೊಸದಾಗಿ ಮೈಷುಗರ್ ನಿರ್ಮಿಸಬೇಕು. ಪಿಎಸ್‍ಎಸ್‍ಕೆ ಪುನಶ್ಚೇತನಗೊಳಿಸಬೇಕು. ಎರಡೂ ಕಾರ್ಖಾನೆಗಳನ್ನು ಖಾಸಗೀಕರಣಗೊಳಿಸಬಾರದು ಎಂದು ತಾಕೀತು ಮಾಡಿದರು.
ಕ್ವಿಂಟಾಲ್ ಭತ್ತಕ್ಕೆ ಕನಿಷ್ಠ 2,100 ರೂ. ನಿಗದಿಪಡಿಸಿ ಭತ್ತ ಖರೀದಿ ಕೇಂದ್ರ ತೆರೆಯಬೇಕು. ರೇಷ್ಮೆ ದರ ದಿನೇ ದಿನೇ ಕುಸಿಯುತ್ತಿದ್ದು, ದರ ಹೆಚ್ಚಿಸುವಂತೆ ರಾಜ್ಯ ಸರಕಾರ ಕೇಂದ್ರಕ್ಕೆ ಒತ್ತಡ ತರಬೇಕು. ಪ್ರೋತ್ಸಾಹ ಧನ ಮುಂದುವರಿಸಬೇಕು. ಮನ್‍ಮುಲ್‍ನಲ್ಲಿ ನಡೆದಿರುವ ಭ್ರಷ್ಟಾಚಾರ ತನೆಖೆಯಾಗಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ, ಪ್ರಧಾನ ಕಾರ್ಯದರ್ಶಿ ಎಸ್.ಮಂಜೇಶ್‍ಗೌಡ, ಕಾರ್ಯಾಧ್ಯಕ್ಷ ಸ್ವಾಮಿಗೌಡ, ನಾಗೇಂದ್ರಸ್ವಾಮಿ, ರಾಮಲಿಂಗೇಗೌಡ, ಸೊ.ಸಿ.ಪ್ರಕಾಶ್, ಕೆ.ಜಿ.ಉಮೇಶ, ಜೆ.ದಿನೇಶ್, ಶ್ರೀಕಂಠಯ್ಯ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News