ರಾಜ್ಯಮಟ್ಟದ ಸಬ್ ಜೂನಿಯರ್ಸ್ ಚೆಸ್ ಪಂದ್ಯಾಟ: ಪ್ರದ್ಯುಮ್ನ ಕುಮಾರ್, ಸ್ವರಲಕ್ಷ್ಮಿ ನಾಯರ್ ಚಾಂಪಿಯನ್

Update: 2019-06-17 18:20 GMT

ಮಂಡ್ಯ, ಜೂ.17: ಮಂಡ್ಯ ಚೆಸ್ ಅಕಾಡೆಮಿ ಹಾಗೂ ಯುನೈಟೆಡ್ ಕರ್ನಾಟಕ ಚೆಸ್ ಸಂಸ್ಥೆ ಸಹಯೋಗದೊಂದಿಗೆ ನಗರದಲ್ಲಿ ನಡೆದ ರಾಜ್ಯಮಟ್ಟದ ಹದಿನೈದು ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ಸಬ್ ಜೂನಿಯರ್ಸ್ ರೇಟಿಂಗ್ ಚೆಸ್ ಪಂದ್ಯಾವಳಿಯಲ್ಲಿ ಪ್ರದ್ಯುಮ್ನಕುಮಾರ್ ಹಾಗೂ ಸ್ವರಲಕ್ಷ್ಮಿ ನಾಯರ್ ಚಾಂಪಿಯನ್ ಪಟ್ಟ ಅಲಂಕಿಸಿದ್ದಾರೆ.

ಬಾಲಕರ ವಿಭಾಗದಲ್ಲಿ ಬೆಂಗಳೂರಿನ ಪ್ರದ್ಯುಮ್ನ ಕುಮಾರ್ (1808 ರೇಟಿಂಗ್ ) ಅಗ್ರ ಶ್ರೇಯಾಂಕಿತ ಆಟಗಾರರನ್ನು ಹಿಂದಿಕ್ಕಿ ಒಂಬತ್ತು ಸುತ್ತಿನಲ್ಲಿ ಒಂದೂ ಪಂದ್ಯವನ್ನು ಸೋಲದೆ ಎಂಟೂವರೆ ಅಂಕ ಗಳಿಸಿ ಚಾಂಪಿಯನ್ ಶಿಪ್ ಪಟ್ಟ ಅಲಂಕರಿಸಿದ್ದಾನೆ. ಅರ್ಹನ್ ಚೇತನ್ ಆನಂದ್ ಎಂಟು ಅಂಕ ಗಳಿಸಿ ದ್ವಿತೀಯ ಸ್ಥಾನ, ರಕ್ಷಿತ್ ಶ್ರೀನಿವಾಸನ್ ಏಳುವರೆ ಅಂಕ ಪಡೆದು ತೃತೀಯ ಹಾಗೂ ನಚಿಕೇತ್ ಅಡಿಗ ನಾಲ್ಕನೇಯ ಸ್ಥಾನ ಪಡೆದರು.

ಬಾಲಕಿಯರ ವಿಭಾಗದಲ್ಲಿ ಬೆಂಗಳೂರಿನ ಸ್ವರಲಕ್ಷ್ಮಿ ನಾಯರ್ ಏಳುವರೆ ಪಾಯಿಂಟ್ ಗಳಿಸಿ ಪ್ರಥಮ ಸ್ಥಾನ, ಅನ್ಯ ಸೇಠ್, ಸಂಜನಾ ರಘುನಾಥ್ ಹಾಗೂ ರೆಂಗನಾಯಕಿ  ಏಳು ಪಾಯಿಂಟ್ ಗಳಿಸಿ ಟ್ರೈ ಬ್ರೇಕ್ ಆಧಾರದ ಮೇಲೆ ಕ್ರಮವಾವಾಗಿ ದ್ವಿತೀಯ, ತೃತೀಯ ಹಾಗೂ ನಾಲ್ಕನೇಯ  ಸ್ಥಾನಗಳನ್ನು ಪಡೆದರು. 

ಗೆದ್ದಿರುವ ಎಲ್ಲಾ ಎಂಟು ಆಟಗಾರರು ಜುಲೈ ತಿಂಗಳಿನಲ್ಲಿ ತಮಿಳುನಾಡಿನ ತಿರುಚೆಂಗೋಡುನಲ್ಲಿ ನಡೆಯಲಿರುವ ರಾಷ್ಟ್ರೀಯ ಸಬ್ ಜೂನಿಯರ್ಸ್ ಪಂದ್ಯಾವಳಿಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. 

ಚಿಕ್ಕಮಗಳೂರಿನ ಹನ್ನೊಂದು ವರ್ಷದ ಅಂಧಗಾರ್ತಿ ಸುನಿಧಿ ಎಚ್.ಮಂಜುನಾಥ ಮೂರು ಪಾಯಿಂಟ್ ಗಳಿಸಿ ಪಂದ್ಯಾವಳಿಯ ವಿಶೇಷ ಆಟಗಾರ್ತಿಯಾಗಿ ಬಹುಮಾನ ಪಡೆದರು. ಕಿರಿಯ ಆಟಗಾರ್ತಿ ಪ್ರಶಸ್ತಿಯನ್ನು ನಾಲ್ಕು ವರ್ಷದ ಮಾನ್ಸಿ ಆಚಾರ್ ಹಾಗೂ ಕಿರಿಯ ಆಟಗಾರ ಪ್ರಶಸ್ತಿಯನ್ನು ಸಮನ್ಯು ಕಕ್ಕಿಲಯ್ಯ ಪಡೆದರು.

ಮಂಡ್ಯದ ಎಸ್.ಬಿ.ಸಮುದಾಯ  ಭವನದಲ್ಲಿ ನಡೆದ ಪಂದ್ಯಾವಳಿಯಲ್ಲಿ ರಾಜ್ಯಾದ್ಯಂತ 333 ಸ್ಪರ್ಧಿಗಳು ಭಾಗವಹಿಸಿದ್ದರು. ವಿಜೇತರಿಗೆ ಎಸ್.ಬಿ.ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ, ನಾಗಮಂಗಲ ಆರ್‍ಟಿಓ ಕಚೇರಿಯ ಅಧೀಕ್ಷಕ ಎಂ.ಜಿ.ಎನ್.ಪ್ರಸಾದ್, ತುಮಕೂರಿನ ಮನೋರೋಗ ತಜ್ಞೆ ಡಾ.ಪದ್ಮಾಕ್ಷಿ ಲೋಕೇಶ್ ಹಾಗೂ ಯುನೈಟೆಡ್ ಕರ್ನಾಟಕ ಚೆಸ್ ಸಂಸ್ಥೆಯ ಉಪಾಧ್ಯಕ್ಷ ನಾಗೇಂದ್ರ ಎಂ. ಬಹುಮಾನ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News