ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ ಪ್ರದಾನ

Update: 2019-06-17 18:22 GMT

ಮಂಡ್ಯ, ಜೂ.17: ದೇವರ ಕುದುರೆ ಕಥಾಸಂಕಲನದ ಕೃತಿಕಾರ ಎಸ್.ಗಂಗಾಧರಯ್ಯ ಅವರಿಗೆ 2018ನೇ ಸಾಲಿನ ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಾನಪದ ತಜ್ಞ ಪ್ರೊ.ಬಿ.ಎ.ವಿವೇಕ ರೈ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ 25 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಮುಖ್ಯ ಅತಿಥಿಯಾಗಿದ್ದ ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಗಾಂಧಿಯನ್ನು ಕೊಂದವರು ದೇಶ ಭಕ್ತರು ಎಂದು ಬಹಿರಂಗವಾಗಿ ಹೇಳುವಂತಹ ಸ್ವಾತಂತ್ರ್ಯ ಸಿಕ್ಕಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕೆಲವು ಸಾಹಿತಿಗಳಿಗೆ ಆಲೋಚಿಸಿ ಉಸಿರಾಡುವಂತಹ ಭಯದ ವಾತಾವರಣ ನಿರ್ಮಾಣವಾಗಿದೆ. ಆದರೆ, ಸಾಹಿತಿಗಳು ಬರೆದಂತೆ ಬದುಕಬೇಕು. ವಿರೋಧ ಎದುರಾದಾಗ ಸರ್ವತ್ಯಾಗಕ್ಕೂ ಸಿದ್ದವಾಗಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.

ರಾಮಣ್ಣ ಅವರ ಕತೆಗಳು ಜೀವಮಿಡಿಯುವ ಕತೆಗಳಾಗಿವೆ. ಅವರದು ನೇರ ನುಡಿಯ, ನಿರ್ಭಯದ ವ್ಯಕ್ತಿತ್ವವಾಗಿತ್ತು. ಗ್ರಾಮೀಣ ಭಾಷೆಯ ಸೊಗಡನ್ನು ತಮ್ಮ ಸಾಹಿತ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ಪ್ರಾಧ್ಯಾಪಕಿ ಡಾ.ಎಲ್.ಜಿ.ಮೀರಾ ಪ್ರಶಸ್ತಿ ವಿಜೇತ ಕೃತಿ ಕುರಿತು ಮಾತನಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಬೆಸಗರಹಳ್ಳಿ ರಾಮಣ್ಣ ಅವರ ಶೋಕಚಕ್ರ ಕವನಸಂಕಲನದ ಎರಡನೇ ಮುದ್ರಣ ಬಿಡುಗಡೆ ಮಾಡಿದರು. 

ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಕೆ.ಪುಟ್ಟಸ್ವಾಮಿ, ಸದಸ್ಯ ರವಿಕಾಂತೇಗೌಡ, ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ  ಡಾ.ಬಿ.ಸಿ.ನಾಗೇಂದ್ರಕುಮಾರ್, ಡಾ.ಕ.ವೈ.ನಾರಾಯಣಸ್ವಾಮಿ, ರಾಮಣ್ಣ ಅವರ ಪತ್ನಿ ಡಿ.ಪಿ.ರಾಜಮ್ಮ,  ಇತರ ಗಣ್ಯರು ಉಪಸ್ಥಿತರಿದ್ದರು.
ಧಾರವಾಡದ ಸುಪ್ರಸಿದ್ದ ಹಿಂದೂಸ್ತಾನಿ ಸಂಗೀತ ಗಾಯಕ ಪಂಡಿತ ಜಯತೀರ್ಥ ಮೇವುಂಡಿ ಅವರಿಂದ ಭಾವಗಾಯನ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News