ಎಲ್ಲಾ ರೈತರಿಗೂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ವಿಸ್ತರಣೆ: ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ

Update: 2019-06-17 18:27 GMT

ಮಂಡ್ಯ, ಜೂ.17: ಕೇಂದ್ರ ಸರಕಾರದ ಯೋಜನೆಯಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಯ ಸೌಲಭ್ಯವನ್ನು ಎಲ್ಲಾ ವರ್ಗದ ರೈತರಿಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಎನ್.ಮಂಜುಶ್ರೀ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸೋಮವಾರ ನಡೆದ ವಿಡಿಯೋ ಸಂವಾದದಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಯೋಜನೆಯ ಅನುಷ್ಠಾನ ಮಾರ್ಗಸೂಚಿಯನ್ವಯ ಎಲ್ಲಾ ಭೂ ಹಿಡುವಳಿ ಹೊಂದಿರುವ ರೈತ ಕುಟುಂಬಕ್ಕೆ ಒಂದು ವರ್ಷಕ್ಕೆ 6000 ರೂ.ಗಳನ್ನು 3 ಕಂತುಗಳಲ್ಲಿ ನೀಡಲಾಗುವುದು ಎಂದರು.

ಈ ಯೋಜನೆಯಡಿ ಸೌಲಭ್ಯವನ್ನು ಪಡೆಯಲು ರೈತರು ಆಧಾರ್ ಸಂಖ್ಯೆಯನ್ನು ಉಪಯೋಗಿಸಲು ಒಪ್ಪಿಗೆಯನ್ನು ಒಳಗೊಂಡಿರುವ ಸ್ವಯಂ ಘೋಷಣೆಯನ್ನು ಅನುಬಂಧದಲ್ಲಿ ಸಲ್ಲಿಸಬೇಕು. ತಮ್ಮ ಅರ್ಜಿಯೊಂದಿಗೆ ಆಧಾರ್ ಪ್ರತಿ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ಸಲ್ಲಿಸಬೇಕು. ಸದರಿ ಅರ್ಜಿಗಳನ್ನು ಆಯಾ ವ್ಯಾಪ್ತಿಯ ಗ್ರಾಮ ಪಂಚಾಯತ್ ನ ಬಾಪೂಜಿ ಸೇವಾ ಕೇಂದ್ರ, ಅಟಲಿಜೀ ಜನ ಸ್ನೇಹಿ ಕೇಂದ್ರ ಹಾಗೂ ಹೋಬಳಿಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಅನುಬಂಧ ಪಡೆಯಲು ಹಾಗೂ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರತಿ ಗ್ರಾಮಗಳ ರೈತರು ಅರ್ಜಿ ಸಲ್ಲಿಸಬೇಕಾದ ನಿಗದಿತ ಸ್ಥಳಗಳನ್ನು ನಿಗದಿಪಡಿಸಲಾಗಿದ್ದು, ಆಯಾ ತಾಲೂಕಿನ ತಹಶೀಲ್ದಾರ್ ಕಛೇರಿ, ತಾಲೂಕು ಪಂಚಾಯಿತಿ ಕಚೇರಿ, ಗ್ರಾಮ ಪಂಚಾಯತಿ ಕಚೇರಿ, ಸಹಾಯ ಕೃಷಿ ನಿರ್ದೇಶಕರ ಕಚೇರಿ, ತೋಟಗಾರಿಕೆ ಇಲಾಖೆ, ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲು ಕ್ರಮವಹಿಸಲಾಗಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಯೊಗೇಶ, ಉಪ ವಿಭಾಗಧೀಕಾರಿ ರಾಜೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾರ್ಹಣಾಧಿಕಾರಿ ಎನ್.ಡಿ.ಪ್ರಕಾಶ್, ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News