ರಿಯಲ್ ಎಸ್ಟೇಟ್ ವಂಚನೆ ಪ್ರಕರಣ: ಮಾಂಟಿ ಛಡ್ಡಾಗೆ ಜಾಮೀನು

Update: 2019-06-17 18:43 GMT

ಹೊಸದಿಲ್ಲಿ, ಜೂ.17: ಪ್ಲ್ಯಾಟ್ ಖರೀದಿಗಾರರಿಗೆ ವಂಚಿಸಿದ ಆರೋಪದಲ್ಲಿ ಬಂಧಿತನಾಗಿರುವ ವೇವ್ ಸಮೂಹ ಸಂಸ್ಥೆಯ ಉಪಾಧ್ಯಕ್ಷ ಮನ್‌ಪ್ರೀತ್ ಸಿಂಗ್ ಛಡ್ಡಾಗೆ ದಿಲ್ಲಿಯ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.

ಮನ್‌ಪ್ರೀತ್ ಸಿಂಗ್ ವೇವ್ ಸಮೂಹ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಉಪ್ಪಲ್- ಛಡ್ಡಾ ಹೈಟೆಕ್ ಡೆವಲಪರ್ಸ್ ಸಂಸ್ಥೆಯ ನಿರ್ದೇಶಕನಾಗಿದ್ದಾನೆ. ಫ್ಲಾಟ್ ಒದಗಿಸಿಕೊಡುವುದಾಗಿ ಈತ ತನ್ನ ಸಂಸ್ಥೆಯ ಮೂಲಕ ಹಣ ಪಡೆದು ವಂಚಿಸಿರುವುದಾಗಿ 29 ಮಂದಿ ದೂರು ಸಲ್ಲಿಸಿದ್ದರು. ಬಳಿಕ ತಲೆಮರೆಸಿಕೊಂಡಿದ್ದ ಛಡ್ಡಾನ ವಿರುದ್ಧ ಲುಕೌಟ್ ನೋಟಿಸ್ ಜಾರಿಯಾಗಿತ್ತು. ಥೈಲ್ಯಾಂಡ್‌ಗೆ ತೆರಳಲು ಮುಂದಾಗಿದ್ದ ಮನ್‌ಪ್ರೀತ್ ಸಿಂಗ್ ಛಡ್ಡಾ ಆಲಿಯಾಸ್ ಮಾಂಟಿ ಛಡ್ಡಾನನ್ನು ದಿಲ್ಲಿ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧ ವಿಭಾಗ ಜೂನ್ 13ರಂದು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿತ್ತು.

ಜಾಮೀನು ಕೋರಿ ಛಡ್ಡಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ಜೂ.17ರಂದು ನಡೆಯಿತು. ಪೂರ್ವಾನುಮತಿ ಪಡೆಯದೆ ದೇಶ ಬಿಟ್ಟು ತೆರಳಬಾರದು ಎಂಬ ಮುಖ್ಯ ಷರತ್ತಿನೊಂದಿಗೆ 50 ಸಾವಿರ ರೂ. ಮೊತ್ತದ ಬಾಂಡ್ ಹಾಗೂ ಇಷ್ಟೇ ಮೊತ್ತದ ಎರಡು ಸಾಕ್ಷಗಳನ್ನು ಸಲ್ಲಿಸಬೇಕೆಂದು ಸೂಚಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಗುಲ್ಷನ್ ಕುಮಾರ್ ಜಾಮೀನು ಮಂಜೂರುಗೊಳಿಸಿದ್ದಾರೆ.

ಜೊತೆಗೆ, ಪ್ಲ್ಯಾಟ್ ಖರೀದಿಗಾರರು ದೂರು ಸಲ್ಲಿಸಿದ್ದರೂ 2018ರ ಜನವರಿಯಿಂದ 2019ರ ಜನವರಿಯವರೆಗೆ ಯಾವುದೇ ತನಿಖೆ ಯಾಕೆ ನಡೆಯಲಿಲ್ಲ ಎಂದು ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳನ್ನು ನ್ಯಾಯಾಲಯ ಪ್ರಶ್ನಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News