ರೋಷನ್ ಬೇಗ್ ವಿರುದ್ಧ ಕ್ರಮಕ್ಕೆ ಎಐಸಿಸಿಗೆ ಶಿಫಾರಸ್ಸು: ದಿನೇಶ್ ಗುಂಡೂರಾವ್

Update: 2019-06-18 12:41 GMT

ಬೆಂಗಳೂರು, ಜೂ.18: ರಾಜ್ಯ ಕಾಂಗ್ರೆಸ್ ನಾಯಕತ್ವ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ವಿರುದ್ಧ ಗುರುತರವಾದ ಆಪಾದನೆಗಳನ್ನು ಮಾಡಿರುವ ಶಾಸಕ ಆರ್.ರೋಷನ್ ಬೇಗ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಎಐಸಿಸಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನವನ್ನು ಹಣಕ್ಕಾಗಿ ಮಾರಾಟ ಮಾಡಲಾಗಿದೆ ಎಂದು ರೋಷನ್ ಬೇಗ್ ಕೀಳಾಗಿ ಮಾತನಾಡಿದ್ದರು. ಈ ಬಗ್ಗೆ ಈಗಾಗಲೇ ಹೈಕಮಾಂಡ್‌ಗೆ ದೂರು ನೀಡಿದ್ದೇನೆ ಎಂದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಎಂದರೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರತಿನಿಧಿ ಇದ್ದ ಹಾಗೇ. ಅವರ ವಿರುದ್ಧವೇ ಕೀಳಾಗಿ ಮಾತನಾಡಿರುವ ರೋಷನ್ ಬೇಗ್ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಿ ಎಂದು ಎಐಸಿಸಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಅವರು ಹೇಳಿದರು. ಐಎಂಎ ಬಹುಕೋಟಿ ವಂಚನೆ ಪ್ರಕರಣದ ಮಾಹಿತಿ, ಐಎಂಎ ಸಂಸ್ಥೆಯ ಅಧ್ಯಕ್ಷ ಮನ್ಸೂರ್ ಖಾನ್‌ನನ್ನು ನನಗೆ ಪರಿಚಯಿಸಿದ್ದು ರೋಷನ್ ಬೇಗ್ ಎಂದು ಹಿರಿಯ ಸಚಿವ ಆರ್.ವಿ.ದೇಶಪಾಂಡೆ ನೀಡಿರುವ ಹೇಳಿಕೆ ಸೇರಿದಂತೆ ಎಲ್ಲ ಮಾಹಿತಿಯನ್ನು ಎಐಸಿಸಿಗೆ ಕಳುಹಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.

ನಿಗಮ-ಮಂಡಳಿಗಳ ನೇಮಕದ ವಿಚಾರ ಚರ್ಚೆಯಾಗಿಲ್ಲ. ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಯಾವೊಬ್ಬ ಶಾಸಕರೂ ಅಸಮಾಧಾನಗೊಂಡಿಲ್ಲ. ಯಾರು ಪಕ್ಷಕ್ಕೆ ನಿಷ್ಠರಾಗಿರುತ್ತಾರೋ ಅಂತಹವರನ್ನು ಸಂಪುಟ ಪುನರಚನೆ ವೇಳೆ ಮಂತ್ರಿ ಮಾಡಲಾಗುವುದು ಎಂಟು ತಿಂಗಳಲ್ಲಿ ಸಂಪುಟ ಪುನರ್ ರಚನೆ ಮಾಡುತ್ತೇವೆ ಎಂದು ಅವರು ಹೇಳಿದರು.

ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖಸ್ಥೆ, ಮಾಜಿ ಸಂಸದೆ ರಮ್ಯಾ, ಚುನಾವಣಾ ಸಮೀಕ್ಷೆಗಾಗಿ ಪಕ್ಷದಿಂದ ಕೋಟ್ಯಂತರ ರೂ.ಗಳನ್ನು ಪಡೆದು ನಾಪತ್ತೆಯಾಗಿದ್ದಾರೆ ಆರೋಪಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಹೊಸದಿಲ್ಲಿಗೆ ಭೇಟಿ ನೀಡಿರುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ದಿಲ್ಲಿಗೆ ಹೋಗುವುದು ಹೊಸ ವಿಚಾರವಲ್ಲ. ಎಐಸಿಸಿ ಅಧ್ಯಕ್ಷರು ಬಂದಿದ್ದಾರೆ. ಅವರನ್ನು ಭೇಟಿ ಮಾಡಲು, ವೈಯಕ್ತಿಕ ಕಾರಣಗಳಿಗೆ ದಿಲ್ಲಿಗೆ ಹೋಗಿರಬಹದು ಎಂದರು.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಜಿಂದಾಲ್ ಸಂಸ್ಥೆಗೆ ಸಾವಿರಾರು ಎಕರೆ ಭೂಮಿ ಪರಭಾರೆ ಮಾಡುವ ವಿಚಾರದ ಕುರಿತು ಮಾತನಾಡಿದ ದಿನೇಶ್ ಗುಂಡೂರಾವ್, ಈ ಹಿಂದೆ ಯಡಿಯೂರಪ್ಪ ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಹಾಗೂ ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದ ವೇಳೆ ಭೂಮಿ ಪರಭಾರೆಗೆ ಒಪ್ಪಂದವಾಗಿದೆ ಎಂದರು.

ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ಮಾಡುವ ವಿಚಾರಕ್ಕೆ ಸ್ವ ಪಕ್ಷೀಯ ಶಾಸಕ ಆನಂದ್ ಸಿಂಗ್ ವಿರೋಧ ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಒಪ್ಪಂದವಾದಾಗ ಆನಂದ್‌ಸಿಂಗ್ ಬಿಜೆಪಿಯಲ್ಲಿದ್ದರು. ಆನಂದ್ ಸಿಂಗ್ ಹಾಗೂ ಅನಿಲ್ ಲಾಡ್ ಬಳಿ ಈ ವಿಚಾರದ ಕುರಿತು ಯಾವುದಾದರೂ ಮಾಹಿತಿಗಳಿದ್ದರೆ, ಅದನ್ನು ಸಚಿವ ಸಂಪುಟ ಉಪ ಸಮಿತಿ ಮುಂದಿಡಲಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News