ಗುಂಡ್ಲುಪೇಟೆ: ನೀರು ಹರಿಸಲು ಆಗ್ರಹಿಸಿ ಕೆರೆಗೆ ಹಾರಿದ ರೈತರು

Update: 2019-06-18 14:00 GMT

ಚಾಮರಾಜನಗರ, ಜೂ.18: ನದಿ ಮೂಲದಿಂದ ಕೆರೆಗೆ ನೀರು ಹರಿಸಲು ಮೀನಾಮೇಷ ಎಣಿಸುತ್ತಿರುವ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಕ್ರಮವನ್ನು ಖಂಡಿಸಿ ಮುಷ್ಕರ ನಡೆಸುತ್ತಿರುವ ರೈತರಲ್ಲಿ ಇಬ್ಬರು ಉತ್ತೂರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸಮೀಪದ ಉತ್ತೂರು ಕೆರೆ ಭರ್ತಿಯಾಗಿ ಕೆಲವು ತಿಂಗಳು ಕಳೆದಿದೆ, ಇಲ್ಲಿಂದ ಪಕ್ಕದ ವಡ್ಡಗೆರೆ ಕೆರೆಗೆ ನೀರು ಹರಿಸಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಪ್ರಯೋಗಿಕವಾಗಿ ನೀರು ಹರಿಸಿ ಯಶಸ್ವಿಯಾಗಿದ್ದರೂ ಸಹ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿರವರ ನಿರಾಸಕ್ತಿಯಿಂದಾಗಿ ವಡ್ಡಗೆರೆ ಕೆರೆಗೆ ಹರಿಯಬೇಕಾಗಿದ್ದ ನೀರು ಕಿಲಗೆರೆ, ಅಮಚವಾಡಿ ಕೆರೆಗಳಿಗೆ ಹರಿಸುವ ಮೂಲಕ ನಿರ್ದಿಷ್ಟ ಯೋಜನೆಯ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ರೈತರು ಆರೋಪಿಸಿದರು.

ವಡ್ಡಗೆರೆ ಕೆರೆಗೆ ನೀರು ಹರಿಯುವ ತನಕ ಹೋರಾಟ ಮುಂದುವರೆಸಲಿರುವ ರೈತರು ಮಂಗಳವಾರ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಆಗಮಿಸದೇ ಇರುವುದನ್ನು ಗಮನಿಸಿ ಜಿಲ್ಲಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಲ್ಲದೆ, ಇಬ್ಬರು ರೈತರು ಕೆರೆಯ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದರು. ಕೂಡಲೇ ಸ್ಥಳದಲ್ಲೇ ಇದ್ದ ಅಗ್ನಿ ಶಾಮಕ ದಳದವರು ಕೆರೆಗೆ ಹಾರಿದ ಪ್ರವೀಣ್ ಹಾಗೂ ಮುರುಗೇಶ್ ಎಂಬವರನ್ನು ರಕ್ಷಿಸಿದರು.

ಉತ್ತೂರು ಕೆರೆಯಲ್ಲಿ ಪರಿಸ್ಥಿತಿ ಮಿತಿಮೀರುತ್ತಿದ್ದು, ಬುಧವಾರದಿಂದ ಮಹಿಳೆಯರು ಮತ್ತು ಮಕ್ಕಳೊಂದಿಗೆ, ಸಾಕು ಪ್ರಾಣಿಗಳೊಂದಿಗೆ ಮುಷ್ಕರ ನಡೆಸಲು ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಈ ನಡುವೆ ಅಹೋರಾತ್ರಿ ಧರಣಿಯಿಂದ ಅಸ್ವಸ್ಥರಾದ ವೃಷಬೇಂದ್ರಪ್ಪರವರಿಗೆ ಉತ್ತೂರುಕೆರೆಯ ಬಳಿಯೇ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಚಿಕಿತ್ಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News