‘ಜಿಂದಾಲ್‌ಗೆ ಭೂಮಿ’ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಹೋರಾಟ: ಆರ್.ಅಶೋಕ್

Update: 2019-06-18 14:25 GMT

ಬೆಂಗಳೂರು, ಜೂ.18: ಜಿಂದಾಲ್ ಸಂಸ್ಥೆಗೆ ಸರಕಾರ ಭೂಮಿ ಪರಭಾರೆ ಮಾಡುವ ಕ್ರಮದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ನಿರಂತರ ಹೋರಾಟ ಮಾಡಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ತಿಳಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಲ್ಲಿರುತ್ತಾರೆ ಎಂದು ಯಾರಿಗೂ ಗೊತ್ತಿಲ್ಲ. ಅವರು ಯಾರ ಕೈಗೂ ಸಿಗುತ್ತಿಲ್ಲ. ಅವರು ಯಾವ ಮನೆಯಲ್ಲಿ ಇರುತ್ತಾರೆ ಅನ್ನುವುದು ಗೊತ್ತಿಲ್ಲ. ಇನ್ನು ಅವರ ಜೊತೆ ಚರ್ಚೆ ಮಾಡುವುದಾದರೂ ಹೇಗೆ ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ನಮಗೆ ಬಹಿರಂಗ ಚರ್ಚೆಗೆ ಬರುವಂತೆ ಆಹ್ವಾನಿಸುವ ಬದಲು, ವಿಧಾನಸಭೆ ಅಧಿವೇಶನವನ್ನು ಕರೆಯಲಿ. ಅಲ್ಲೇ ನಾವು ಜಿಂದಾಲ್‌ಗೆ ಸರಕಾರ ಭೂಮಿ ಪರಭಾರೆ ಮಾಡುವ ವಿಚಾರದಲ್ಲಿ ಆಗುತ್ತಿರುವ ತಪ್ಪುಗಳ ಬಗ್ಗೆ ಚರ್ಚೆ ನಡೆಸಲು ಸಿದ್ಧವಿದ್ದೇವೆ ಎಂದು ಅವರು ಹೇಳಿದರು.

ಜಿಂದಾಲ್ ಸಂಸ್ಥೆಯಿಂದ ಯಡಿಯೂರಪ್ಪ ಚೆಕ್ ಮೂಲಕ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ಕುಮಾರಸ್ವಾಮಿ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಪ್ರಕರಣದಲ್ಲಿ ನ್ಯಾಯಾಲಯವೇ ಅವರನ್ನು ಆರೋಪ ಮುಕ್ತ ಮಾಡಿರುವುದನ್ನು ಕುಮಾರಸ್ವಾಮಿ ಮರೆತಂತಿದೆ ಎಂದರು.

ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ಮಾಡುವ ಸರಕಾರದ ನಿರ್ಧಾರದ ವಿರುದ್ಧ ಮೊದಲು ಧ್ವನಿ ಎತ್ತಿದ್ದು ಯಡಿಯೂರಪ್ಪ ಅಲ್ಲ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಚ್.ಕೆ.ಪಾಟೀಲ್ ಹಾಗೂ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಈ ಅಕ್ರಮದ ಬಗ್ಗೆ ಮೊದಲು ಮಾತನಾಡಿದರು. ಮುಖ್ಯಮಂತ್ರಿ ಮೊದಲು ತಮ್ಮ ಹಾಗೂ ಮಿತ್ರ ಪಕ್ಷದ ನಾಯಕರ ಅನುಮಾನಗಳಿಗೆ ಪರಿಹಾರ ಕೊಡಲಿ ಎಂದು ಅವರು ಆಗ್ರಹಿಸಿದರು.

ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಜಿಂದಾಲ್‌ಗೆ ಭೂಮಿ ನೀಡಿದ ಆರೋಪವನ್ನು ತಳ್ಳಿಹಾಕಿದ ಅಶೋಕ್, ಜಿಂದಾಲ್‌ಗೆ ಭೂಮಿ ನೀಡಿದಾಗ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಿದ್ದರು. ಗಣಿ ಖಾತೆ ಅವರ ಅಧೀನದಲ್ಲಿತ್ತು. ಅಧಿಕಾರವಿಲ್ಲದೇ ನಾವು ಭೂಮಿ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಜಿಂದಾಲ್ ಸಂಸ್ಥೆಯಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ಸ್ಥಳೀಯ ಕಾಂಗ್ರೆಸ್ ಶಾಸಕರೇ ಜಿಂದಾಲ್‌ಗೆ ಭೂಮಿ ಮಾರಾಟ ಮಾಡುವುದನ್ನು ವಿರೋಧಿಸುತ್ತಿದ್ಧಾರೆ. ಇದೊಂದು ದೊಡ್ಡ ಹಗರಣವಾಗಿದೆ ಎಂದು ಅಶೋಕ್ ದೂರಿದರು.

ಈ ವಿಚಾರದ ಕುರಿತು ಸಂಪುಟ ಉಪ ಸಮಿತಿ ರಚಿಸಬೇಕಾದ ಅಗತ್ಯವೇ ಇರಲಿಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವರಾದ ಕೆ.ಜೆ.ಜಾರ್ಜ್ ಹಾಗೂ ಡಿ.ಕೆ.ಶಿವಕುಮಾರ್ ಹೊರತುಪಡಿಸಿ ಬೇರೆ ಯಾರಿಗೂ ಜಿಂದಾಲ್‌ಗೆ ಭೂಮಿ ನೀಡಲು ಇಷ್ಟವಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News