ಅಲ್ಪಸಂಖ್ಯಾತರ ಮೇಲಿನ ಹಲ್ಲೆ, ದೌರ್ಜನ್ಯಗಳ ವಿರುದ್ಧ ಆಯೋಗದಿಂದ ಕಠಿಣ ಕ್ರಮ: ಜಿ.ಎ.ಬಾವಾ

Update: 2019-06-18 14:29 GMT

ಬೆಂಗಳೂರು, ಜೂ.18: ರಾಜ್ಯ ವ್ಯಾಪಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಸುವ ಹಲ್ಲೆ, ದೌರ್ಜನ್ಯಗಳ ವಿರುದ್ಧ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಆಯೋಗದ ನೂತನ ಅಧ್ಯಕ್ಷ ಜಿ.ಎ.ಬಾವಾ ಹೇಳಿದರು.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಮಾಡುತ್ತಾರೆ. ಜೊತೆಗೆ, ಕೆಲ ಕಡೆ ಹಲ್ಲೆಗಳು, ದೌರ್ಜನ್ಯಗಳು ನಡೆಯುತ್ತವೆ. ಇದರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಹಾಗೂ ಮೈತ್ರಿ ಸರಕಾರದ ಯೋಜನೆಗಳ ಯಶಸ್ಸಿಗೆ ಶ್ರಮಿಸಲಾಗುವುದು ಎಂದ ಅವರು, ಅಲ್ಪಸಂಖ್ಯಾತ ಸಮುದಾಯದ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಈ ನಿಟ್ಟಿನಲ್ಲಿ, ಸರಕಾರಿ ಶಾಲೆಗಳಿಗೆ ಆಯೋಗ ಭೇಟಿ ನೀಡಲಿದೆ ಎಂದು ತಿಳಿಸಿದರು.

ನಾಲ್ಕನೇ ಒಂದರಷ್ಟು ಮಕ್ಕಳನ್ನು ಉರ್ದು ಭಾಷೆಗೆ ಸೇರಿಸುವ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಉರ್ದು ಭಾಷಾ ಶಿಕ್ಷಕರ ನೇಮಕಾತಿ, ಸ್ಥಳ ನಿಯುಕ್ತಿಗಾಗಿ ಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ, ಕೇಂದ್ರ ಮತ್ತು ರಾಜ್ಯ ಸರಕಾರದ ಉನ್ನತ ಹುದ್ದೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳು ಸೇರ್ಪಡೆಗೊಳ್ಳಬೇಕು. ಇದಕ್ಕಾಗಿ, ಅರ್ಹ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಮದರಸ ಆಧುನೀಕರಣ ಕೇಂದ್ರದ ಯೋಜನೆ ಅಡಿಯಲ್ಲಿ, ಶೈಕ್ಷಣಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಪ್ರಾಥಮಿಕ ಶಿಕ್ಷಣದ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು. ಜೊತೆಗೆ, ವಸತಿ, ಸಾಲ ಸೌಲಭ್ಯಗಳನ್ನು ಒದಗಿಸಲು ಮುಂದಾಗುವುದಾಗಿ ಜಿ.ಎ.ಬಾವಾ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಕಾರ್ಯದರ್ಶಿ ಅನೀಸ್ ಸಿರಾಜ್, ಸದಸ್ಯರಾದ ಬಲಜಿತ್ ಸಿಂಗ್ ಸೇರಿದಂತೆ ಪ್ರಮುಖರಿದ್ದರು.

‘2 ಜಿಲ್ಲೆಗಳಿಗೆ ಭೇಟಿ’

ಅಲ್ಪಸಂಖ್ಯಾತರ ಸ್ಥಿತಿ-ಗತಿ ಹಾಗೂ ಅಗತ್ಯ ಸೌಲಭ್ಯಗಳನ್ನು ಒಗಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು ಎರಡು ಜಿಲ್ಲೆಗಳಿಗೆ ಭೇಟಿ ನೀಡಲಾಗುವುದು. ಜೊತೆಗೆ, ಹೊಸ ಕಾರ್ಯಕ್ರಮಗಳ ಮೂಲಕ, ಹಿಂದುಳಿತ ಅಲ್ಪಸಂಖ್ಯಾತರ ಪ್ರಗತಿಗೆ ಮುಂದಾಗುವುದು.

-ಜಿ.ಎ.ಬಾವಾ, ಅಧ್ಯಕ್ಷ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News