ಸಿಎಂ ಸ್ಥಾನದಲ್ಲಿದ್ದು ಹೊಣೆಗೇಡಿತನದಿಂದ ಮಾತನಾಡುವುದು ಸರಿಯಲ್ಲ: ಕುಮಾರಸ್ವಾಮಿಗೆ ಬಿಎಸ್‍ವೈ ತಿರುಗೇಟು

Update: 2019-06-18 15:07 GMT

ಬೆಂಗಳೂರು, ಜೂ.18: ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಹೊಣೆಗೇಡಿತನದಿಂದ ಮಾತನಾಡುವುದು ಸರಿಯಲ್ಲ. ಸಿಬಿಐ ನ್ಯಾಯಾಲಯ ನನ್ನನ್ನು ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

'ಜಿಂದಾಲ್‌ನಿಂದ 20 ಕೋಟಿ ರೂ.ಕಿಕ್‌ಬ್ಯಾಕ್ ಅನ್ನು ಚೆಕ್ ಮೂಲಕ ಯಡಿಯೂರಪ್ಪ ಪಡೆದಿದ್ದನ್ನು ನಾನೇ ಬಹಿರಂಗಪಡಿಸಿದ್ದೆ. ಇದನ್ನು ಮರೆತಿರುವ ಅವರು ನನ್ನ ವಿರುದ್ಧ ಹೋರಾಟ ಮಾಡುತ್ತಿದ್ದಾರೆ' ಎಂಬ ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಯಡಿಯೂರಪ್ಪ ಟ್ವೀಟರ್‌ನಲ್ಲಿ ತಿರುಗೇಟು ನೀಡಿದ್ದಾರೆ.

ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಹೊಣೆಗೇಡಿತನದಿಂದ ಮಾತನಾಡುವುದು ಸರಿಯಲ್ಲ. ಸಿಬಿಐ ನ್ಯಾಯಾಲಯ ನನ್ನನ್ನು ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಿದೆ. ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುವಂತೆ ಹಗುರವಾಗಿ ಮಾತನಾಡಬೇಡಿ. ಆಡಳಿತದಲ್ಲಿ ಸಂಪೂರ್ಣ ವಿಫಲರಾಗಿ, ದಿಕ್ಕೆಟ್ಟಿರುವ ನೀವು, ನಿಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ವ್ಯರ್ಥಪ್ರಯತ್ನ ಮಾಡಬೇಡಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರಕಾರವು ಜಿಂದಾಲ್ ಸಂಸ್ಥೆಗೆ 3666 ಎಕರೆ ಭೂಮಿಯನ್ನು ಪರಭಾರೆ ಮಾಡುವುದನ್ನು ವಿರೋಧಿಸಿ ಬಳ್ಳಾರಿವರೆಗೆ ಪಾದಯಾತ್ರೆ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ಬಳ್ಳಾರಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರೋಧಿಸಿ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಸಿದ್ದರಾಮಯ್ಯ ನೇತೃತ್ವದಲ್ಲಿ 2012ರಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆ ಮಾದರಿಯಲ್ಲೇ, ಬಿಜೆಪಿ ಪಾದಯಾತ್ರೆ ಹಮ್ಮಿಕೊಳ್ಳಲಿದೆ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅವರು ಇಂದು ಸ್ಪಷ್ಟನೆ ನೀಡಿದರು.

ಜಿಂದಾಲ್ ಸಂಸ್ಥೆಗೆ ರಾಜ್ಯ ಸರಕಾರವು ಅಗ್ಗದ ಬೆಲೆಗೆ ಭೂಮಿ ಪರಭಾರೆ ಮಾಡುತ್ತಿರುವ ವಿಚಾರವನ್ನು ಖಂಡಿಸಿ, ಬಿಜೆಪಿ ಯಾವುದೇ ಪಾದಯಾತ್ರೆ ಮಾಡಲು ಉದ್ದೇಶಿಸಿಲ್ಲ. ಆದರೆ, ಈ ಕುರಿತು ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ, ಐಎಂಎ ವಂಚನೆ ಪ್ರಕರಣ, ರೈತರ ಕೃಷಿ ಸಾಲ ಮನ್ನಾ ಮಾಡುವುದರಲ್ಲಿ ವಿಫಲವಾಗಿರುವ ಸರಕಾರದ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಹೋರಾಟ ರೂಪಿಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News