ಮನವೊಲಿಸುವ ಪ್ರಯತ್ನ ವಿಫಲ: ಜೆಡಿಎಸ್ ವರಿಷ್ಠರ ಮನವಿಗೂ ಮಣಿಯದ ಎಚ್.ವಿಶ್ವನಾಥ್

Update: 2019-06-18 16:08 GMT

ಬೆಂಗಳೂರು, ಜೂ.18: ಸದ್ಯ ನನಗೆ ವಿಶ್ರಾಂತಿ ಬೇಕು. ಕೆಲ ಸಮಯದ ನಂತರ ಪುನಃ ಜೆಡಿಎಸ್‌ನಲ್ಲಿ ಸಕ್ರಿಯನಾಗುತ್ತೇನೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆಯನ್ನು ಅಂಗೀಕರಿಸಬೇಕೆಂದು ಎಚ್.ವಿಶ್ವನಾಥ್ ಜೆಡಿಎಸ್ ವರಿಷ್ಠರಿಗೆ ಮನವಿ ಮಾಡಿದ್ದಾರೆ.

ಇಲ್ಲಿನ ಪದ್ಮನಾಭನಗರದಲ್ಲಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ನಿವಾಸದಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾವೆುಯನ್ನು ವಾಪಸ್ ಪಡೆಯಬೇಕೆಂದು ಎಚ್.ವಿಶ್ವನಾಥ್‌ರನ್ನು ಮನವೊಲಿಸುವ ಪ್ರಯತ್ನ ವಿಫಲವಾಗಿದೆ.

ಎಚ್.ವಿಶ್ವನಾಥರನ್ನು ಸ್ವತಃ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರೆ ಮನವೊಲಿಸುವ ಪ್ರಯತ್ನ ಮಾಡಿದರು. ಇವರೊಂದಿಗೆ ಸಚಿವರಾದ ಸಾ.ರಾ.ಮಹೇಶ್ ಹಾಗೂ ಜಿ.ಟಿ.ದೇವೇಗೌಡ, ಯಾವುದೆ ಕಾರಣಕ್ಕೂ ರಾಜ್ಯಾಧ್ಯಕ್ಷ ಸ್ಥಾನವನ್ನು ತ್ಯಜಿಸಬಾರದು. ನಮಗೆ ಮಾರ್ಗದರ್ಶನ ನೀಡಬೇಕೆಂದು ಮನವಿ ಮಾಡಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆ ಅತ್ಯಂತ ಜವಾಬ್ದಾರಿಯದ್ದು. ರಾಜ್ಯಾದ್ಯಂತ ತಿರುಗಾಡಿ ಪಕ್ಷವನ್ನು ಸಂಘಟಿಸಬೇಕಾಗುತ್ತದೆ. ಆದರೆ, ನನಗೆ ಈಗ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಮುಂದುವರೆಯುವಂತೆ ಒತ್ತಾಯಿಸಬೇಡಿ ಎಂದು ಎಚ್.ವಿಶ್ವನಾಥ್ ಮನವಿ ಮಾಡಿದ್ದಾರೆ ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News