×
Ad

ಬಸ್‌ಪಾಸ್ ಬಾಕಿ ಹಣ ಬಿಡುಗಡೆಗೆ ಸಚಿವ ಡಿ.ಸಿ.ತಮ್ಮಣ್ಣ ಮನವಿ

Update: 2019-06-18 22:01 IST

ಬೆಂಗಳೂರು, ಜೂ.18: ಸಾರಿಗೆ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ರಿಯಾಯಿತಿ ಬಸ್‌ಪಾಸ್‌ಗಳಿಗೆ ಸಂಬಂಧಿಸಿದಂತೆ 350 ಕೋಟಿ ರೂ.ಗಳಷ್ಟು ಬಾಕಿಯಿದ್ದು, ಅದನ್ನು ಕೊಡಿಸಿಕೊಡಲು ಅಗತ್ಯ ವ್ಯವಸ್ಥೆ ಮಾಡುವಂತೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸರಕಾರದ ಮುಖ್ಯ ಕಾರ್ಯದರ್ಶಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಜನಪ್ರತಿನಿಧಿಗಳಿಂದ ಬಸ್ ನಿಲ್ದಾಣ, ಬಸ್ ಡಿಪೋ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬೇಡಿಕೆಗಳು ಹೆಚ್ಚುತ್ತಿವೆ. ಹೆಚ್ಚಿನ ಅನುದಾನದ ಅಗತ್ಯವಿರುವ ಬಗ್ಗೆ ಮನವರಿಕೆ ಮಾಡಿ ಆರ್ಥಿಕ ಇಲಾಖೆಯಿಂದ ಅನುದಾನ ಒದಗಿಸಿಕೊಡುವಂತೆ ಇದೇ ಸಂದರ್ಭದಲ್ಲಿ ಸಚಿವರು ವಿನಂತಿಸಿದ್ದಾರೆ.

ದೇವರಾಜ ಅರಸು ಟ್ರಕ್ ಟರ್ಮಿನಲ್‌ನಲ್ಲಿ ಬೇಕಾಗಿರುವ ಮೂಲಭೂತ ಸೌಲಭ್ಯಗಳ ಕುರಿತು ಚರ್ಚೆ ನಡೆಸಿದ್ದು, ಡಿಡಿಯುಟಿಟಿಎಲ್ ಅನ್ನು ಈಗಾಗಲೇ ಬಿಬಿಎಂಪಿ ವ್ಯಾಪ್ತಿಗೆ ಒಳಪಡಿಸಿರುವುದರಿಂದ ಡಿಡಿಯುಟಿಟಿಎಲ್‌ನ ಒಳಗಿನ ಕಸ ವಿಲೇವಾರಿ, ಶೌಚಾಲಯ ನಿರ್ಮಾಣ, ಬೀದಿ ದೀಪ, ಇನ್ನಿತರೆ ಸೌಲಭ್ಯಗಳನ್ನು ಬಿಬಿಎಂಪಿಯವರು ನಿರ್ವಹಿಸಬೇಕಾಗಿದೆ ಎಂದು ವಿವರಿಸಿದ್ದಾರೆ.

ಯಶವಂತಪುರ ಡಿಡಿಯುಟಿಟಿಎಲ್‌ನ ಆವರಣದ ಸುತ್ತ ಕಾಂಪೌಡ್ ನಿರ್ಮಿಸಲು 2.5 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದ್ದು, ದಾಸನಪುರ ಟ್ರಕ್ ಟರ್ಮಿನಲ್‌ಗೆ ಸಂಬಂಧಿಸಿದಂತೆ ರಸ್ತೆ ಸಮಸ್ಯೆಯಿದ್ದು, ರಸ್ತೆಯನ್ನು 60 ಅಡಿ ವಿಸ್ತೀರ್ಣದಲ್ಲಿ ನಿರ್ಮಿಸುವುದು ಸೂಕ್ತವಾದುದು ಎಂದು ತಿಳಿಸಿದ್ದಾರೆ.

ಟ್ರಕ್‌ಟರ್ಮಿನಲ್ ವತಿಯಿಂದ ಹೊಸಪೇಟೆ ಇನ್ನಿತರೆ ಕಡೆಗಳಲ್ಲಿ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಿದ್ದು, ಒಟ್ಟಾರೆ ಸಮಗ್ರ ಅಭಿವೃದ್ಧಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ವಿವಿಧ ಅಧಿಕಾರಿಗಳ ಜೊತೆ ಚರ್ಚಿಸಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಅಗತ್ಯ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News