ಕ್ಯಾನ್ಸರ್‌ನಿಂದ ಬದುಕಿದವರ ನೆರವಿಗೆ ‘ವಿ ಕ್ಯಾನ್’ ಅಭಿಯಾನ

Update: 2019-06-18 17:23 GMT

ಬೆಂಗಳೂರು, ಜೂ.18: ಕ್ಯಾನ್ಸರ್ ರೋಗದಿಂದ ಬದುಕುಳಿದವರಿಗೆ ಬೆಂಬಲ ಮತ್ತು ಪುನರ್‌ವಸತಿ ಕಲ್ಪಿಸಲು ಮಣಿಪಾಲ್ ಆಸ್ಪತ್ರೆಯು ‘ವಿ ಕ್ಯಾನ್’ ಎಂಬ ಅಭಿಯಾನವನ್ನು ಕ್ಯಾನ್ಸರ್ ರೋಗ ತಜ್ಞೆ ಡಾ.ಪೂನಮ್ ಪಾಟೀಲ್ ಅನಾವರಣಗೊಳಿಸಿದ್ದಾರೆ.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ‘ವಿ ಕ್ಯಾನ್’ ಎಂಬ ಅಭಿಯಾನವನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಕ್ಯಾನ್ಸರ್ ರೋಗದಿಂದ ಬದುಕುಳಿದವರಿಗೆ ಪೂರ್ಣ ಪ್ರಮಾಣದ ಸಹಾಯ ಪೂರೈಸುವುದಲ್ಲದೆ ಅವರಲ್ಲಿ ಬದುಕುವ ಭರವಸೆಯನ್ನು ಮೂಡಿಸುವುದು ನಮ್ಮ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಜೀವನ ನಡೆಸಲು ಅವರಿಗೆ ನೆರವಾಗುವ ಅಗತ್ಯವಾದ ಎಲ್ಲ ಪರಿಹಾರಗಳನ್ನು ಪೂರೈಸಲು ವಿ ಕ್ಯಾನ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಚಿಕಿತ್ಸಾ ಅಧಿವೇಶನಗಳು, ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಿಕೆ ಇನ್ನೂ ಮುಂತಾದ ವಿಷಯಗಳ ಕುರಿತು ಅನೇಕ ಕಾರ್ಯಕ್ರಮವನ್ನು ಕೈಗೊಳ್ಳಲಿದ್ದೇವೆ ಎಂದರು.

ಕ್ಯಾನ್ಸರ್‌ ರೋಗ ಶಾಸ್ತ್ರ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಸೋಮಶೇಖರ್ ಮಾತನಾಡಿ, ಭಾರತದಲ್ಲಿ 11 ಲಕ್ಷ 50 ಸಾವಿರಕ್ಕೂ ಹೆಚ್ಚು ಕ್ಯಾನ್ಸರ್‌ಪೀಡಿತ ರೋಗಿಗಳಿದ್ದಾರೆ. ಕ್ಯಾನ್ಸರ್ ಗುಣಪಡಿಸಬಹುದುದಾದ ರೋಗವಾಗಿದ್ದರೂ, ಕ್ಯಾನ್ಸರ್ ಬಂದರೆ ಸಾವು ಖಚಿತ ಎಂಬ ಭಾವನೆಯಿಂದ ರೋಗಿಗಳು ಸಕಾಲಕ್ಕೆ ಸಮರ್ಪಕವಾದ ಚಿಕಿತ್ಸೆಯನ್ನು ಪಡೆಯದೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

ಚಿಕಿತ್ಸೆಯನ್ನು ಪಡೆಯದೆ ಇರುವುದಕ್ಕೆ ಮೂಲ ಕಾರಣ ಆತ್ಮಸ್ಥೆರ್ಯ ಕಳೆದುಕೊಳ್ಳುವುದೇ ಆಗಿದೆ. ಹಾಗಾಗಿ ಕ್ಯಾನ್ಸರ್ ರೋಗದಿಂದ ಬದುಕುಳಿದ ವ್ಯಕ್ತಿಗಳಿಗೆ ಕ್ಯಾನ್ಸರ್ ಪೀಡಿತರಿಗೆ ಮಾರ್ಗದರ್ಶನ, ಉತ್ಸಾಹವನ್ನು ಭಾವನ್ಮಾಕವಾಗಿ ವಿ ಕ್ಯಾನ್ ಅಭಿಯಾನದ ಮೂಲಕ ಆತ್ಮಸ್ಥೈರ್ಯ ತುಂಬಲಾಗುವುದು ಎಂದು ನುಡಿದರು.

ರೋಗಿಗೆ ಕೇವಲ ಚಿಕಿತ್ಸೆ ನೀಡುವುದರಿಂದ ಕ್ಯಾನ್ಸರ್ ಗುಣವಾಗುವುದಿಲ್ಲ. ಕ್ಯಾನ್ಸರ್ ಚಿಕಿತ್ಸೆಯ ನಂತರ ಪ್ರತಿಯೊಬ್ಬ ವ್ಯಕ್ತಿಗೂ ಆರೈಕೆಯ ಮತ್ತು ಆತ್ಮವಿಶ್ವಾಸವು ಅಷ್ಟೇ ಅವಶ್ಯಕವಾಗಿದೆ. ಆತ್ಮವಿಶ್ವಾಸ ಇದ್ದರೆ ಯಾವ ರೋಗದಿಂದಲೂ ಗುಣಮುಖ ವಾಗಬಹುದು. ಈ ರೀತಿಯ ಎಲ್ಲಾ ನೆರವುಗಳು ನಮ್ಮ ವಿ ಕ್ಯಾನ್ ಅಭಿಯಾನದಲ್ಲಿ ದೊರಕುತ್ತದೆ. ರಾಜ್ಯದ್ಯಂತ ಇರುವ ಎಲ್ಲಾ ಕ್ಯಾನ್ಸರ್ ಪೀಡಿತರು, ಗುಣಮುಖ ರಾದವರು ನಮ್ಮ ಅಭಿಯಾನ ಕೇಂದ್ರಕ್ಕೆ ಆಗಮಿಸಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News