ಆಸ್ಪತ್ರೆಯ ದುರವಸ್ಥೆಯ ಬಗ್ಗೆ ನಿಮಗೇನೂ ಅನಿಸುವುದಿಲ್ಲವೇ ?: ವೈದ್ಯಾಧಿಕಾರಿಗಳ ಕಾರ್ಯವೈಖರಿ ಪ್ರಶ್ನಿಸಿದ ಸಚಿವರು

Update: 2019-06-18 17:42 GMT

ಬೀದರ್, ಜೂ.18: ನಿತ್ಯ ಆಸ್ಪತ್ರೆಯಲ್ಲಿಯೇ ಇರುವ ನಿಮಗೆ ಆಸ್ಪತ್ರೆಯು ದುರವಸ್ಥೆಯಲ್ಲಿದೆ ಎಂಬ ಬಗ್ಗೆ ನಿಮಗೆ ಏನೂ ಅನಿಸುವುದಿಲ್ಲವೇ, ವೈದ್ಯರಿಗೆ ಇದು ಕಾಣಿಸುವುದಿಲ್ಲವೇ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಂಡೆಪ್ಪ ಖಾಶೆಂಪೂರ ಪ್ರಶ್ನಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂ ಖಾನ್ ಅವರೊಂದಿಗೆ ಇಂದು ಬ್ರಿಮ್ಸ್ ಗೆ ಭೇಟಿ ನೀಡಿ, ಆಸ್ಪತ್ರೆ ವೀಕ್ಷಣೆ ಬಳಿಕ ಬ್ರಿಮ್ಸ್ ಸಭಾಂಗಣದಲ್ಲಿ  ಸಭೆ ನಡೆಸಿದ ಅವರು, ಸಭೆಯಲ್ಲಿದ್ದ ವೈದ್ಯಾಧಿಕಾರಿಗಳು ಮತ್ತು ವೈದ್ಯರನ್ನು ಮೇಲಿನಂತೆ ಪ್ರಶ್ನಿಸಿ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ತಾವು ಒಂದು ದಿನವಾದರೂ ನನ್ನ ಬಳಿ ಬಂದು ಆಸ್ಪತ್ರೆಯ ದುಸ್ಥಿತಿ ಬಗ್ಗೆ  ಹೇಳಿದ್ದೀರಾ? ಆಸ್ಪತ್ರೆಯನ್ನು ಸರಿ ಮಾಡಿಸಿಕೊಡಿ ಎಂದು ಹೇಳಿ ಕನಿಷ್ಟ ಅರ್ಧ ಗಂಟೆಯಾದರೂ ಕಾದಿದ್ದೀರಾ ಎಂದು ಸಚಿವರು ವೈದ್ಯಾಧಿಕಾರಿಗಳನ್ನು ಪ್ರಶ್ನಿಸಿ, ತರಾಟೆಗೆ ತೆಗೆದುಕೊಂಡರು.

ಹಲವು ಸಭೆ: ತಾನು ಈ ಹಿಂದೆ ಹಲವಾರು ಬಾರಿ ಆಸ್ಪತ್ರೆಗೆ ಭೇಟಿ‌ ನೀಡಿ ವೈದ್ಯಾಧಿಕಾರಿಗಳ ಸಭೆ ನಡೆಸಿ ಸಭೆ ಸರಿಪಡಿಸಿಕೊಳ್ಳುವಂತೆ ತಿಳಿಸಿದ್ದೇನೆ ಎಂಬುದನ್ನು ಸಚಿವರು ವೈದ್ಯಾಧಿಕಾರಿಗಳಿಗೆ ಪುನಃ ನೆನಪಿಸಿದರು. ಆಸ್ಪತ್ರೆಯಲ್ಲಿ ಒಂದೂ ಶೌಚಾಲಯ ಸರಿಯಿಲ್ಲ. ಲಿಪ್ಟ್ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಎಷ್ಟೋ ಬೆಡ್ ಗಳು ಈಗಲೂ ಖಾಲಿ ಬಿದ್ದಿವೆ. ಎಲ್ಲಾ ಕಡೆ ಅಶುಚಿತ್ವ ಕಾಣುತ್ತಿದೆ. ಹೀಗೆ ಸಮಸ್ಯೆಗಳ ಪಟ್ಟಿ ಬೆಳೆಯುತ್ತದೆ. ಆದರೂ ಇಲ್ಲಿನ ವ್ಯವಸ್ಥೆ ಸರಿ ಹೋಗುತ್ತಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಹಣಕ್ಕೆ ಕೊರತೆ ಇಲ್ಲ: ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಆಸ್ಪತ್ರೆ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂದು ವೈದ್ಯಕೀಯ ಅಧೀಕ್ಷಕರಾದ ವಿಜಯಕುಮಾರ ಅಂತಪ್ಪನವರ ಅವರು ಹೇಳಿದರು. 'ಹಣಕ್ಕೆ ಕೊರತೆ ಇಲ್ಲ. ಡಯಾಲಿಸಿಸ್, ಸ್ಕ್ಯಾನಿಂಗ್ ಗೆ ಎಷ್ಟು ಮೆಶೀನ್ ಗಳು ಬೇಕು ಎಂದು ಇಂದೇ ಪ್ರಸ್ತಾವನೆ ನೀಡಿ, ನಾಳೆ ನಡೆಯುವ ಉನ್ನತ ಮಟ್ಟದ ಸಭೆಯಲ್ಲಿ ಮೆಶೀನ್ಗಳ ಖರೀದಿಗೆ ಅನುಮತಿ ನೀಡುವುದಾಗಿ ಸಚಿವರು ಹೇಳಿದರು. ವೈದ್ಯಾಧಿಕಾರಿಗಳ ಮತ್ತು ಸಿಬ್ಬಂದಿ ನೇಮಿಸಿಕೊಳ್ಳುವ ಬಗ್ಗೆ ಕೂಡ ನಾಳೆಯ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಗುವುದು ಎಂದು ಸಚಿವರು ತಿಳಿಸಿದರು.

ಅನುದಾನ ಬಳಸದ್ದಕ್ಕೆ ಗರಂ: ಆಸ್ಪತ್ರೆಗೆ ಇದುವರೆಗೆ ಖರ್ಚಾದ ಅನುದಾನ ಬಳಕೆ ಬಗ್ಗೆ ದಾಖಲೆ ಪರಿಶೀಲನೆ ವೇಳೆ, ಎಸ್ಸಿಪಿ ಮತ್ತು ಟಿಎಸ್ಪಿ ಅನುದಾನ ಸೇರಿದಂತೆ ಕೋಟ್ಯಂತರ ರೂ ಅನುದಾನವನ್ನು ಇದುವರೆಗೆ ಬಳಸಿಯೇ ಇಲ್ಲ ಎಂಬುದನ್ನು ತಿಳಿದ ಸಚಿವರು, ಇದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಯಾಗಿಸಿ ಕ್ರಮ ವಹಿಸಲಾಗುವುದು ಎಂದು ಸಚಿವರು ಎಚ್ಚರಿಸಿದರು.

ಈ  ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳು, ಪಿಡಿಬ್ಲ್ಯುಡಿ ಇಂಜಿನಿಯರ್ ಪ್ರಶಾಂತ, ವೈದ್ಯಕೀಯ ಅಧೀಕ್ಣಕರಾದ ವಿಜಯಕುಮಾರ ಅಂತಪ್ಪನವರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯಕುಮಾರ ಅಂತಪ್ಪನವರ ಹಾಗೂ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News