ಅಮೆರಿಕ ಮೆಡಿಕಲ್ ಡಿಸೈನ್ ಎಕ್ಸಲೆನ್ಸ್ ಪ್ರಶಸ್ತಿ: ಕೊಡಗಿನ ವಿಚಲ್ ಮುತ್ತಣ್ಣ ತಂಡಕ್ಕೆ ಮೂರನೇ ಸ್ಥಾನ

Update: 2019-06-18 17:58 GMT

ಮಡಿಕೇರಿ, ಜೂ.18: ಅಮೆರಿಕದ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕೊಡಗಿನ ಪಾಲಂದಿರ ವಿಚಲ್ ಮುತ್ತಣ್ಣ ನೇತೃತ್ವದ ತಂಡವು ಮೆಡಿಕಲ್ ಡಿಸೈನ್ ಎಕ್ಸಲೆನ್ಸ್ ಪ್ರಶಸ್ತಿ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದಿದೆ.

ಅಮೆರಿಕದ ರಾಷ್ಟ್ರಮಟ್ಟದಲ್ಲಿ ನೀಡಲಾಗುವ ಬಿಎಂಇ ಐಡಿಯಾ 2019 ಎಂಬ ಪ್ರಶಸ್ತಿಯನ್ನು ಅಮೆರಿಕದ ಮೆಡಿಕಲ್ ಕ್ಷೇತ್ರದ ತಂತ್ರಜ್ಞಾನದ ಸಂಶೋಧನೆಗಾಗಿ ನೀಡಲಾಗುತ್ತದೆ. ಜೂ.11ರಂದು ನ್ಯೂಯಾರ್ಕ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭಲ್ಲಿ ವಿಚಲ್ ಪಿಎಚ್‌ಡಿ ಮಾಡುತ್ತಿರುವ ಯೂನಿವರ್ಸಿಟಿ ಆಫ್ ವಿಚಿಗನ್ ಇನ್ನೋವೇಷನ್ ತಂಡ ಮತ್ತು ವಿಚಲ್ ಪಾಲ್ಗೊಂಡಿದ್ದರು. KalEYEdoscope (ಕಲೈಡೋಸ್ಕೋಪ್) ವೃದ್ಧಾಪ್ಯದಲ್ಲಿ ಕಾಡುವ ಮ್ಯಾಕ್ಯುಲ್ ಡೀಜನರೇಶನ್ (ಕಣ್ಣಿನ ಸಮಸ್ಯೆ) ಗೆ ಕಾರಣ ಏನು ಎಂದು ಪತ್ತೆ ಹಚ್ಚುವ ಯಂತ್ರವನ್ನು ಆವಿಷ್ಕರಿಸಿರುವುದು ವಿಚಲ್ ಹಾಗೂ ಅವರ ತಂಡದ ಸಾಧನೆಯಾಗಿದೆ.

ಪ್ರಸ್ತುತ ಕಣ್ಣಿನ ಈ ಸಮಸ್ಯೆಯನ್ನು ಪತ್ತೆಹಚ್ಚುವ ಯಂತ್ರ ಇಲ್ಲಿಯವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿರಲಿಲ್ಲ. ಪ್ರಸ್ತುತ ಸಮಸ್ಯೆಗೆ ಔಷಧಿಯನ್ನು ಕಂಡು ಹಿಡಿಯುವ ಪ್ರಯತ್ನದಲ್ಲಿ ವಿಚಲ್ ಮತ್ತು ತಂಡ ಇದೆ. ಈ ಪುರಸ್ಕಾರ ವಿಚಲ್ ಮತ್ತು ತಂಡದ ವೈದ್ಯಕೀಯ ಕ್ಷೇತ್ರದ ಸಾಧನೆಗೆ ಸಂದ ಗೌರವವಾಗಿದೆ. ವಿಚಲ್ ವೀರಾಜಪೇಟೆಯ ಬಲಂಬೇರಿ ಗ್ರಾಮದ ಪಾಲಂದಿರ ಡಿ.ಜಯಾ ಮುತ್ತಣ್ಣ ಮತ್ತು ಮಿಥುನ ದಂಪತಿ ಪುತ್ರಿ.

ಮಡಿಕೇರಿಯ ಸಂತ ಜೋಸೆಫರ ಶಾಲೆಯಲ್ಲಿ 10ನೇ ತರಗತಿಯಲ್ಲಿ ಜಿಲ್ಲೆಗೆ ತೃತೀಯ ಸ್ಥಾನವನ್ನು ಗಳಿಸಿ ನಂತರ ಗೋಣಿಕೊಪ್ಪದ ವಿದ್ಯಾನಿಕೇತನ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದರು. ವಿಶ್ವೇಶ್ವರಯ್ಯ ಟೆಕ್‌ನಾಲಾಜಿಕಲ್ ಯೂನಿವರ್ಸಿಟಿಯ ಎಂಟೆಕ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಅಲ್ಲದೆ ಗಾಂಧಿಯನ್ ಎಂಗ್ ಟೆಕ್ನಿಕಲ್ ಇನ್ನೋವೇಷನ್ (GYTI ) ರಾಷ್ಟ್ರಮಟ್ಟದ ಪ್ರಶಸ್ತಿಯನ್ನು 2016 ರಲ್ಲಿ ಹಿಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪಡೆದುಕೊಂಡಿರುವುದು ವಿಚಲ್ ಅವರ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News