ಅನಾರೋಗ್ಯ ಪೀಡಿತ ಸಂತ್ರಸ್ತೆಗೆ ಗ್ರಾಮ ತೊರೆಯಲು ಒತ್ತಡ: ಮಡಿಕೇರಿ ನಗರಸಭಾ ಅಧಿಕಾರಿಗಳ ವಿರುದ್ಧ ಅಸಮಾಧಾನ

Update: 2019-06-18 18:03 GMT

ಮಡಿಕೇರಿ ಜೂ.18 : ತನ್ನ ವಾಸದ ಮನೆಯಿದ್ದ ಜಾಗ ಸುರಕ್ಷಿತ ಪ್ರದೇಶದಲ್ಲಿದ್ದರೂ ಮನೆ ನಿರ್ಮಿಸಿಕೊಡದೆ ಸುರಕ್ಷಿತವಲ್ಲದ ಪ್ರದೇಶವೆಂದು ಘೋಷಿಸಿ ಮಳೆಹಾನಿ ಸಂತ್ರಸ್ತ ಮಹಿಳೆಯೊಬ್ಬರನ್ನು ಸೋಮವಾರಪೇಟೆ ತಾಲೂಕಿನ ಕುಂಬೂರಿಗೆ ತೆರಳುವಂತೆ ಒತ್ತಡ ಹೇರುತ್ತಿರುವ ಪ್ರಕರಣವೊಂದು ಮಡಿಕೇರಿಯ ಮಲ್ಲಿಕಾರ್ಜುನನಗರ ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ.

ಮನೆ ಕೆಲಸ ಮಾಡಿಕೊಂಡು ಕಡು ಬಡತನದಲ್ಲಿ ಜೀವನ ಸಾಗಿಸುತ್ತಿರುವ ಕಿವುಡುತನ ಹೊಂದಿರುವ ವಿಧವಾ ಮಹಿಳೆ ಹೆಚ್.ಲಕ್ಷ್ಮೀ ಎಂಬುವವರು ಕಳೆದ 35 ವರ್ಷಗಳಿಂದ ಮಲ್ಲಿಕಾರ್ಜುನನಗರ ಬಡಾವಣೆಯಲ್ಲಿ ಸುಮಾರು 2 ಸೆಂಟ್ ವಿಸ್ತೀರ್ಣದ ಸ್ವಂತ ಜಾಗದಲ್ಲಿ ಶೀಟ್ ಮತ್ತು ಹೆಂಚಿನ ಮನೆಯಲ್ಲಿ ವಾಸವಾಗಿದ್ದರು. ಆದರೆ ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆಗೆ ಮನೆ ನೆಲಸಮಗೊಂಡಿತ್ತು. 

ಬೀದಿಗೆ ಬಿದ್ದ ಲಕ್ಷ್ಮೀ ಹಾಗೂ ಅವರ ಇಬ್ಬರು ಪುತ್ರರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದರು. ಸರಕಾರ ಬಾಡಿಗೆ ಮನೆಗೆ 10 ಸಾವಿರ ರೂ. ನಿಗಧಿ ಮಾಡಿದ ಬಳಿಕ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಮನೆಯ ಸಾಮಾಗ್ರಿಗಳು ಮಳೆಯಲ್ಲಿ ನಾಶವಾದ ಕಾರಣ ಇವುಗಳ ನಷ್ಟಕ್ಕೆ ಪರಿಹಾರವಾಗಿ 50 ಸಾವಿರವನ್ನು ಸರಕಾರ ಲಕ್ಷ್ಮೀ ಅವರಿಗೆ ನೀಡಿದೆ. ಆದರೆ ಸ್ವಂತ ಜಾಗದಲ್ಲೇ ಮನೆ ನಿರ್ಮಿಸಿಕೊಡಿ ಎಂದು ಅರ್ಜಿ ಸಲ್ಲಿಸಿದರೆ ಜಾಗವನ್ನೇ ಪರಿಶೀಲಿಸದ ನಗರಸಭಾ ಅಧಿಕಾರಿಗಳು ಮನೆಯಿದ್ದ ಜಾಗ ವಾಸಕ್ಕೆ ಯೋಗ್ಯವಿಲ್ಲವೆಂದು ಘೋಷಿಸುವ ಮೂಲಕ ಲಕ್ಷ್ಮೀ ಅವರನ್ನು ಆತಂಕಕ್ಕೆ ತಳ್ಳಿದ್ದಾರೆ. ಅಲ್ಲದೆ ಕುಂಬೂರಿನಲ್ಲಿ ನಿರ್ಮಿಸಿಕೊಡುವ ಮನೆಯಲ್ಲಿ ವಾಸಿಸುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನುವ ಆರೋಪವಿದೆ.

ಓರ್ವ ಪುತ್ರನ ಒಂದು ಕಾಲು ಸ್ವಾಧೀನ ಕಳೆದುಕೊಂಡು ಕೆಲಸ ಮಾಡದ ಸ್ಥಿತಿಗೆ ತಲುಪಿದ್ದಾರೆ. ಶಸ್ತ್ರ ಚಿಕಿತ್ಸೆಗಾಗಿ 2 ರಿಂದ 3 ಲಕ್ಷ ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಮತ್ತೊಬ್ಬ ಪುತ್ರ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ ಎಂದು ಅನಾರೋಗ್ಯ ಪೀಡಿತ ಲಕ್ಷ್ಮೀ ಅವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿರುವ ನಾನು ಸುರಕ್ಷಿತ ಜಾಗವನ್ನು ಬಿಟ್ಟು ದೂರದ ಸೋಮವಾರಪೇಟೆಯ ಕುಂಬೂರಿಗೆ ಹೋಗಬೇಕೆ ಎಂದು ಅವರು ಕಣ್ಣೀರು ಹಾಕುತ್ತಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ್ದ ಮಾಜಿ ನಗರಸಭಾ ಸದಸ್ಯ ಕೆ.ಎಂ.ಗಣೇಶ್ ಅವರು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಲಕ್ಷ್ಮೀ ಅವರ ಜಾಗ ಇರುವ ಅಕ್ಕಪಕ್ಕದಲ್ಲೇ ಹತ್ತಾರು ಮನೆಗಳಿವೆ. ಈ ಜಾಗ ವಾಸಕ್ಕೆ ಯೋಗ್ಯವಾಗಿದೆ, ಅಲ್ಲದೆ ರಸ್ತೆಯೂ ಇದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ಕಚೇರಿಯಲ್ಲಿ ಕುಳಿತುಕೊಂಡು ಬಡ ಮಹಿಳೆಯ ಮೇಲೆ ಗದಾಪ್ರಹಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 

ಇದೊಂದು ಉದಾಹರಣೆಯಷ್ಟೆ, ಆದರೆ ಕಳೆದ ವರ್ಷ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಅನೇಕ ಸಂತ್ರಸ್ತರನ್ನು ಅಧಿಕಾರಿಗಳು ಕಡೆಗಣಿಸಿದ್ದಾರೆ. ಸ್ವತ: ನನಗೆ ಸೇರಿದ ಮೂರುಎಕರೆ ಕಾಫಿ ತೋಟ ಮಳೆಯಲ್ಲಿ ಕೊಚ್ಚಿ ಹೋಗಿದ್ದರೂ ಇಲ್ಲಿಯವರೆಗೆ ಒಂದು ರೂಪಾಯಿ ಪರಿಹಾರವನ್ನೂ ನೀಡಿಲ್ಲವೆಂದು ಗಣೇಶ್ ದೂರಿದರು. 

ಜಿಲ್ಲಾಧಿಕಾರಿಗಳು ನೀಡುವ ಆದೇಶಗಳನ್ನು ಕೆಳಗಿನ ಅಧಿಕಾರಿಗಳು ಪಾಲಿಸುತ್ತಿಲ್ಲವೆಂದು ಆರೋಪಿಸಿರುವ ಅವರು ಜಿಲ್ಲಾ ಉಸ್ತುವಾರಿ ಸಚಿವರು ಅಸಡ್ಡೆ ತೋರುವ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಮತ್ತು ಸ್ಥಳ ಪರಿಶೀಲನೆ ನಡೆಸಿ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಕ್ತ ಆದೇಶವನ್ನು ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಹಾಜರಿದ್ದ ನಗರಸಭಾ ಮಾಜಿ ಉಪಾಧ್ಯಕ್ಷೆ ಲೀಲಾಶೇಷಮ್ಮ ಮಾತನಾಡಿ ಕಿವುಡುತನ ಮತ್ತು ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಲಕ್ಷ್ಮೀ ಅವರ ಅರ್ಜಿಯ ಬಗ್ಗೆ ಅಧಿಕಾರಿಗಳ ಬಳಿ ಪ್ರಶ್ನಿಸಿದರೆ ದರ್ಪದಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. 

ಸಂತ್ರಸ್ತ ಮಹಿಳೆಯರೇ ಸೇರಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News