ಬಿಜೆಪಿ ಸದಸ್ಯತ್ವ ಅಭಿಯಾನ: ರಾಜ್ಯದಲ್ಲಿ 50 ಲಕ್ಷ ಸದಸ್ಯರ ಸೇರ್ಪಡೆ- ಯಡಿಯೂರಪ್ಪ

Update: 2019-06-19 13:19 GMT

ಬೆಂಗಳೂರು, ಜೂ.19: ಬಿಜೆಪಿ ಸದಸ್ಯತ್ವ ಅಭಿಯಾನದ ಪೂರ್ವಭಾವಿ ತಯಾರಿಗೆ ಚಾಲನೆ ನೀಡಿರುವ ಬಿಜೆಪಿಯ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ, ಬುಧವಾರ ದೇಶದ ಎಲ್ಲ ರಾಜ್ಯಗಳ ಮುಖಂಡರು ಮತ್ತು ಸದಸ್ಯತ್ವ ಅಭಿಯಾನ ರಾಜ್ಯ ಉಸ್ತುವಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.

ಕಾಲಮಿತಿಯಲ್ಲಿ ಸದಸ್ಯತ್ವ ಅಭಿಯಾನ ನಡೆಸುವುದರ ಜೊತೆಗೆ ಶಕ್ತಿ ಕೇಂದ್ರದ ಮಟ್ಟದವರೆಗೂ ಸದಸ್ಯತ್ವ ನೋಂದಣಿ ತಲುಪುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ವಿಶೇಷವಾಗಿ ಸದಸ್ಯತ್ವದ ಪ್ರಮಾಣ ಕಡಿಮೆಯಾಗಿರುವ ಪ್ರದೇಶಗಳಲ್ಲಿ ಸದಸ್ಯತ್ವಕ್ಕೆ ಒತ್ತು ನೀಡುವಂತೆ ಜೆ.ಪಿ.ನಡ್ಡಾ ಸೂಚಿಸಿದರು.

ಮಧ್ಯಪ್ರದೇಶದಿಂದ ವಿಡಿಯೋ ಸಂವಾದದಲ್ಲಿ ಭಾಗಿಯಾದ ಸದಸ್ಯತ್ವ ಅಭಿಯಾನದ ರಾಷ್ಟ್ರೀಯ ಉಸ್ತುವಾರಿ ಶಿವರಾಜ್ ಸಿಂಗ್ ಚವ್ಹಾಣ್ ಮಾತನಾಡಿ, ಪಕ್ಷದ ಸದಸ್ಯತ್ವವು ಸರ್ವವ್ಯಾಪಿ ಮತ್ತು ಸರ್ವ ಸ್ಪರ್ಶಿಯಾಗಬೇಕು. ಒಂದು ವಾರ ಕಾಲ ಸದಸ್ಯತ್ವ ಅಭಿಯಾನಕ್ಕಾಗಿ ವಿಸ್ತಾರಕರನ್ನು ನಿಯೋಜಿಸಬೇಕು. ಪಕ್ಷವು ಆಡಳಿತದಲ್ಲಿ ಇಲ್ಲದ ರಾಜ್ಯಗಳಲ್ಲೂ ಸದಸ್ಯತ್ವ ನೋಂದಣಿಗೆ ಮಹತ್ವ ನೀಡಬೇಕೆಂದರು.

ರಾಷ್ಟ್ರವ್ಯಾಪಿ ಸದಸ್ಯತ್ವದ ಆಂದೋಲನವು ಜು.6ರಂದು ಆರಂಭವಾಗಲಿದ್ದು, ಆಗಸ್ಟ್ 11ಕ್ಕೆ ಮುಕ್ತಾಯವಾಗುತ್ತದೆ ಎಂದು ಶಿವರಾಜ್‌ಸಿಂಗ್ ಚವ್ಹಾಣ್ ತಿಳಿಸಿದರು. ರಾಷ್ಟ್ರೀಯ ಐಟಿ ಸೆಲ್ ಈ ಬಾರಿಯ ಸದಸ್ಯತ್ವ ಅಭಿಯಾನದ ಯಶಸ್ಸಿಗೆ ವಿಶೇಷ ಯೋಜನೆ ರೂಪಿಸಿದ್ದು, ಬಿಜೆಪಿ ಐಟಿ ಸೆಲ್ ರಾಷ್ಟ್ರೀಯ ಸಂಚಾಲಕ ಅಮಿತ್ ಮಾಳವೀಯ, ಸದಸ್ಯತ್ವ ನೋಂದಣಿಗೆ ರೂಪಿಸಿರುವ ಯೋಜನೆಗಳ ಮಾಹಿತಿ ನೀಡಿದರು.

ಬೆಂಗಳೂರಿನಿಂದ ವಿಡಿಯೋ ಸಂವಾದದಲ್ಲಿ ಭಾಗಿಯಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕಳೆದ ಬಾರಿ ರಾಜ್ಯದಲ್ಲಿ 80 ಲಕ್ಷ ಸದಸ್ಯರನ್ನು ನೋಂದಾಯಿಸಲಾಗಿತ್ತು. ಈ ಬಾರಿ ಇನ್ನೂ 50 ಲಕ್ಷ ಸದಸ್ಯರನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗುವುದು. ರಾಜ್ಯದಲ್ಲಿ ಪಕ್ಷದ ಐಟಿ ಸೆಲ್ ಸಕ್ರಿಯವಾಗಿದ್ದು, ಈ ಗುರಿ ತಲುಪುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿ ಸದಸ್ಯತ್ವ ಅಭಿಯಾನ ಉಸ್ತುವಾರಿ ಎನ್.ರವಿಕುಮಾರ್, ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಮುಖಂಡರಾದ ಮುನಿರಾಜು, ವಿ.ಸೋಮಣ್ಣ, ಚಲವಾದಿ ನಾರಾಯಣಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News