ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ

Update: 2019-06-19 13:26 GMT

ಶಿವಮೊಗ್ಗ, ಜೂ. 19: ಜಮೀನಿನಲ್ಲಿರುವ ಮನೆಯೊಂದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಗ್ರಾಮ ಪಂಚಾಯತ್ ನಿಂದ ಎನ್‍ಓಸಿ (ಆಕ್ಷೇಪಣಾ ರಹಿತ ಪತ್ರ) ನೀಡಲು ಗ್ರಾಮಸ್ಥರೋರ್ವರಿಂದ ಲಂಚ ಸ್ವೀಕರಿಸುತ್ತಿದ್ದ ಗ್ರಾ.ಪಂ. ಅಧ್ಯಕ್ಷರೋರ್ವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ.) ಪೊಲೀಸರು ಬಂಧಿಸಿರುವ ಘಟನೆ ಬುಧವಾರ ಭದ್ರಾವತಿ ತಾಲೂಕಿನಲ್ಲಿ ನಡೆದಿದೆ. 

ಹಿರಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಹೆಚ್.ಎಲ್.ಅಣ್ಣಪ್ಪ ಎಸಿಬಿ ಬಲೆಗೆ ಬಿದ್ದವರೆಂದು ಗುರುತಿಸಲಾಗಿದೆ. ಗ್ರಾ.ಪಂ. ಕಚೇರಿಯಲ್ಲಿಯೇ ಇವರು ಲಂಚ ಸ್ವೀಕರಿಸುವಾಗ ಎಸಿಬಿ ಪೊಲೀಸರು ಲಂಚದ ಹಣದ ಸಮೇತ ಬಂಧಿಸಿದ್ದಾರೆ. 

ಇವರ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಎಸಿಬಿ ಡಿವೈಎಸ್‍ಪಿ ವೇಣುಗೋಪಾಲ್, ಇನ್ಸ್‍ಪೆಕ್ಟರ್ ವೀರೇಂದ್ರ, ಸಿಬ್ಬಂದಿಗಳಾದ ವಸಂತ್, ಲಚ್ಚಾನಾಯ್ಕ್, ರಘುನಾಯ್ಕ್ ಮೊದಲಾದವರಿದ್ದರು.

ಘಟನೆ ಹಿನ್ನೆಲೆ: ದೂರುದಾರ ಪುಲ್ಲಯ್ಯ ಎಂಬುವರು ಜಮೀನಿನಲ್ಲಿರುವ ತಮ್ಮ ಮನೆಗೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಗ್ರಾ.ಪಂ.ಗೆ ಎನ್‍ಓಸಿ ಪತ್ರ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. 

ಎನ್‍ಓಸಿ ಪತ್ರ ನೀಡಬೇಕಾದರೆ ಹಣ ನೀಡುವಂತೆ ಅಧ್ಯಕ್ಷ ಹೆಚ್.ಎಲ್.ಅಣ್ಣಪ್ಪ ಡಿಮ್ಯಾಂಡ್ ಮಾಡಿದ್ದರು. ಈ ಬಗ್ಗೆ ಪುಲ್ಲಯ್ಯರವರು ಎ.ಸಿ.ಬಿ. ಪೊಲೀಸರ ಗಮನಕ್ಕೆ ತಂದಿದ್ದರು. ಪುಲ್ಲಯ್ಯರವರು ಅಧ್ಯಕ್ಷರಿಗೆ 2 ಸಾವಿರ ರೂ. ನೀಡುವ ವೇಳೆ, ಎ.ಸಿ.ಬಿ. ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News