ಕಾಂಗ್ರೆಸ್ ನಿಂದ ರೋಷನ್ ಬೇಗ್ ಅಮಾನತು: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ?

Update: 2019-06-19 15:01 GMT

ಹೊಸದಿಲ್ಲಿ, ಜೂ.19: ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆರ್.ರೋಷನ್ ಬೇಗ್ ಅವರನ್ನು ನಾನು ಪಕ್ಷದಿಂದ ಅಮಾನತು ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕೆಪಿಸಿಸಿ ವತಿಯಿಂದ ರೋಷನ್ ಬೇಗ್ ಅವರಿಗೆ ನೋಟಿಸ್ ನೀಡಲಾಗಿತ್ತು. ಅದಕ್ಕೆ ಅವರು ಉತ್ತರಿಸಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಶಿಫಾರಸ್ಸು ಮಾಡಿತ್ತು. ಅದರಂತೆ, ಎಐಸಿಸಿ ಅವರನ್ನು ಅಮಾನತು ಮಾಡಿದೆ ಎಂದರು.

ನಾನು ಇಂಡಿಯನ್ ಕಾಂಗ್ರೆಸ್‌ನಲ್ಲಿದ್ದೇನೆ, ಸಿದ್ದು ಕಾಂಗ್ರೆಸ್‌ನಲ್ಲಿಲ್ಲ ಎಂದು ರೋಷನ್ ಬೇಗ್ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಾವೆಲ್ಲರೂ ಇರುವುದು ಇಂಡಿಯನ್ ಕಾಂಗ್ರೆಸ್‌ನಲ್ಲಿ. ಆದರೆ, ರೋಷನ್ ಬೇಗ್ ಈಗ ಎಲ್ಲಿದ್ದಾರೆ ಅನ್ನೋದು ಗೊತ್ತಿಲ್ಲ ಎಂದರು. ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ಮಾಡುವ ವಿಚಾರದ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್, ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಲಿ, ಅದನ್ನು ಬಿಟ್ಟು ನನ್ನ ಹೆಸರನ್ನು ಅವರು ಯಾಕೆ ಪ್ರಸ್ತಾಪ ಮಾಡುತ್ತಾರೆ. ಈ ವಿಚಾರದ ಬಗ್ಗೆ ನಾನು ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಜೊತೆ ಮಾತನಾಡಿ, ಪರಿಶೀಲಿಸುವಂತೆ ಹೇಳಿದ್ದೇನೆ ಎಂದರು.

ಸಚಿವ ಸಂಪುಟಕ್ಕೆ ನೂತನವಾಗಿ ಸೇರ್ಪಡೆಯಾಗಿರುವ ಪಕ್ಷೇತರ ಶಾಸಕರಿಗೆ ಖಾತೆಗಳನ್ನು ಹಂಚಿಕೆ ಮಾಡಬೇಕಾಗಿರುವುದು ಮುಖ್ಯಮಂತ್ರಿ. ಒಂದು ಪಕ್ಷದ ರಾಜ್ಯಾಧ್ಯಕ್ಷರಾಗಿ ಈ ಸಾಮಾನ್ಯ ವಿಷಯವನ್ನು ಅವರು ತಿಳಿದುಕೊಳ್ಳಬೇಕು ಎಂದು ವಿಶ್ವನಾಥ್‌ಗೆ ಅವರು ತಿರುಗೇಟು ನೀಡಿದರು.

ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಮಾಡುವ ವಿಚಾರದ ಕುರಿತು ವಿಶ್ವನಾಥ್, ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಲಿ, ಅವರು ನೀಡಿದ ಹೇಳಿಕೆಗಳಿಗೆಲ್ಲ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಇದೇ ವೇಳೆ ವಿಶ್ವನಾಥ್ ಹಾಗೂ ರಾಮಲಿಂಗಾರೆಡ್ಡಿ ಭೇಟಿ ವಿಚಾರದ ಬಗ್ಗೆಯೂ ನಾನು ಏನೂ ಮಾತನಾಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News