ಸಮನ್ವಯ ಸಮಿತಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ?

Update: 2019-06-19 15:28 GMT

ಬೆಂಗಳೂರು, ಜೂ. 19: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದು, ರಾಜಕೀಯ ವಲಯದ ಕುತೂಹಲಕ್ಕೆ ಕಾರಣವಾಗಿದೆ. ಬುಧವಾರ ಬೆಳಗ್ಗೆ ಇಲ್ಲಿನ ಸದಾಶಿವನಗರದಲ್ಲಿನ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ತೆರಳಿದ ಎಚ್.ಡಿ.ಕುಮಾರಸ್ವಾಮಿ, ಖರ್ಗೆ ಅವರೊಂದಿಗೆ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು ಎಂದು ಗೊತ್ತಾಗಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೇಮಕ ಮಾಡಲಾಗುತ್ತಿದೆ ಎಂಬ ಸುದ್ದಿಯ ಬೆನ್ನಲ್ಲೆ ಸಿಎಂ ಕುಮಾರಸ್ವಾಮಿ, ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿರುವುದು ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದೆ.

ಗ್ರಾಮ ವಾಸ್ತವ್ಯದ ಬಗ್ಗೆ ಚರ್ಚೆ: ಲೋಕಸಭೆ ಚುನಾವಣೆಯಲ್ಲಿ ಪರಾಭವದ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಸಹಜವಾಗಿಯೇ ನನ್ನನ್ನು ಭೇಟಿ ಮಾಡಿದ್ದು, ಇದರಲ್ಲಿ ಯಾವುದೇ ವಿಶೇಷವಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಇದೇ ವೇಳೆ ಸ್ಪಷ್ಟನೆ ನೀಡಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯ ನಾನು ಈ ಹಿಂದೆ ಪ್ರತಿನಿಧಿಸುತ್ತಿದ್ದ ಗುರುಮಿಠ್ಕಲ್ ಕ್ಷೇತ್ರದಲ್ಲಿ ಸಿಎಂ ಗ್ರಾಮ ವಾಸ್ತವ್ಯ ಮಾಡುತ್ತಿದ್ದು, ಕ್ಷೇತ್ರದ ಅಭಿವೃದ್ಧಿ, ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆಗಳಿದ್ದು ಬಗೆಹರಿಸಲು ಸಿಎಂಗೆ ಮನವಿ ಮಾಡಿದ್ದೇನೆ ಎಂದರು.

‘ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಬೇಕಿತ್ತು’ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಖರ್ಗೆ, ಇದೀಗ ಅದೆಲ್ಲ ಮುಗಿದ ಅಧ್ಯಾಯ. ಈಗಾಗಲೇ ನಾನು ಚುನಾವಣೆಯಲ್ಲಿ ಸೋಲು ಕಂಡಿದ್ದೇನೆ. ಹೀಗಾಗಿರುವಾಗ ಸರಕಾರಕ್ಕೆ ಸಲಹೆ ನೀಡುವ ಪ್ರಶ್ನೆಯೇ ಇಲ್ಲ ಎಂದರು.

ಮೈತ್ರಿ ಸರಕಾರದಲ್ಲಿ ಹಲವು ವ್ಯತ್ಯಾಸಗಳಿದ್ದು, ಅವುಗಳನ್ನು ಸರಿಪಡಿಸಲು ಹೇಳಿದ್ದೇನೆ. ಜಿಲ್ಲೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋಗಬೇಕಿದ್ದು, ಆ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕೆಲ ಸೂಚನೆಗಳನ್ನು ನೀಡಲು ಹೇಳಿದ್ದೇನೆ ಎಂದು ಖರ್ಗೆ ಇದೇ ವೇಳೆ ತಿಳಿಸಿದರು.

‘ಪಕ್ಷದ ವರಿಷ್ಠರು ಹಾಗೂ ಮುಖಂಡರ ಬಗ್ಗೆ ಎಷ್ಟೇ ಅಸಮಾಧಾನವಿದ್ದರೂ ಅದನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಅವಕಾಶವಿಲ್ಲ. ಪಕ್ಷದ ವಿರುದ್ಧ ಬಹಿರಂಗ ಹೇಳಿಕೆಯೂ ಸರಿಯಲ್ಲ. ಏನೇ ಸಮಸ್ಯೆಗಳಿದ್ದರೂ ಪಕ್ಷದ ಚೌಕಟ್ಟಿನಲ್ಲಿ ಕೂತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು’

-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಹಿರಿಯ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News