ಏರ್‌ಕ್ರಾಫ್ಟ್ ಸೊಸೈಟಿಯಲ್ಲಿ ಅಕ್ರಮ ಆರೋಪ: ಶಾಸಕ ಸುರೇಶ್ ಗೌಡಗೆ ನೋಟಿಸ್

Update: 2019-06-19 16:46 GMT

ಬೆಂಗಳೂರು, ಜೂ.19: ದಿ ಏರ್‌ಕ್ರಾಫ್ಟ್ ಎಂಪ್ಲಾಯಿಸ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಅಕ್ರಮವೆಸಗಿರುವ ಆರೋಪಕ್ಕೆ ಸಂಬಂಧಿಸಿದಂತೆ ನಾಗಮಂಗಲ ಶಾಸಕ ಸುರೇಶ್ ಗೌಡ ಅವರಿಗೆ ನೋಟಿಸ್ ನೀಡಲಾಗಿದೆ. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ನೊಟೀಸ್ ಜಾರಿಯಾಗಿದ್ದು, ಜೂ.21ರಂದು ವಿಚಾರಣೆಗೆ ಬೆಂಗಳೂರು ಕೇಂದ್ರ ಕಚೇರಿಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ?: 2000ದಿಂದ 2009ರವರೆಗೆ ಶಾಸಕ ಸುರೇಶ್ ಗೌಡ ಸೊಸೈಟಿಯ ಅಧ್ಯಕ್ಷರಾಗಿದ್ದರು. ಅವರ ಅಧಿಕಾರದ ಅವಧಿಯಲ್ಲಿ ಎಸ್ಸಿ-ಎಸ್ಟಿ ನೌಕರರಿಗೆ ಸೇರಬೇಕಿದ್ದ ನಿವೇಶನ ಬೇರೆಯವರಿಗೆ ಹಂಚಿಕೆ ಮಾಡಿ ಅವ್ಯವಹಾರ ಮಾಡಿರುವ ಆರೋಪ ಕೇಳಿಬಂದಿದೆ.

ಎಸ್ಸಿ-ಎಸ್ಟಿಗೆ ನೀಡಬೇಕಿದ್ದ 803 ನಿವೇಶನದಲ್ಲಿ ಕೇವಲ 246 ನಿವೇಶನಗಳನ್ನು ನೀಡಲಾಗಿದೆ. ಇನ್ನುಳಿದ ನಿವೇಶನಗಳನ್ನು ಸುರೇಶ್ ಗೌಡ ತನ್ನ ಕಡೆಯವರಿಗೆ ಅಕ್ರಮವಾಗಿ ನೀಡಿದ್ದಾರೆಂದು ಆರೋಪಿಸಲಾಗಿದ್ದು, ಈ ಸಂಬಂಧ ಎಚ್‌ಎಎಲ್ ನೌಕರರಾದ ಗಣೇಶನ್ ಎಂಬವರು ಕಳೆದ ತಿಂಗಳು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು.

ಗಣೇಶನ್ ಅವರ ದೂರು ಆಧರಿಸಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಶಾಸಕ ಸುರೇಶ್ ಗೌಡ ಅವರಿಗೆ ಅಧಿಕಾರಿಗಳು ಜೂ.21 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಶಾಸಕ ಸುರೇಶ್ ಗೌಡ ಜೊತೆಗೆ ಎಂ.ಎ.ಗೋಪಾಲಸ್ವಾಮಿ, ಎಂ. ಸಂತೋಷ್, ಎನ್.ದೇವರಾಜ್ ಎಂಬುವರಿಗೂ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News