"ಜೆಡಿಎಸ್​ನ ಯಾವ ಶಾಸಕರಿಗೆ ಆಮಿಷ ಒಡ್ಡಿದ್ದೇವೆ ಎಂಬುದನ್ನು ಬಹಿರಂಗಪಡಿಸಲಿ"

Update: 2019-06-19 17:00 GMT

ಬೆಂಗಳೂರು, ಜೂ.19: ಜೆಡಿಎಸ್ ಪಕ್ಷದ ಯಾವ ಮುಖಂಡ, ಶಾಸಕರಿಗೆ ನಾವು ಆಮಿಷಗಳನ್ನು ಒಡ್ಡಿದ್ದೇವೆ ಎಂಬುದನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಹತಾಶ ಭಾವನೆಯಿಂದ ನಮ್ಮ ವಿರುದ್ಧ ಆಪರೇಷನ್ ಕಮಲದ ಆರೋಪ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಯಾಗಿ ಈ ರೀತಿ ಸಾರ್ವಜನಿಕ ಸಭೆಗಳಲ್ಲಿ ಸುಳ್ಳು ಆರೋಪ ಮಾಡುವುದಕ್ಕೂ ಮುನ್ನ ಯಾರು ಯಾರಿಗೆ ಆಮಿಷವೊಡ್ಡಿದ್ದಾರೋ ಅವರ ಹೆಸರುಗಳನ್ನು ಬಹಿರಂಗ ಪಡಿಸಿದರೆ ಅವರ ಸ್ಥಾನಕ್ಕೂ ಶೋಭೆ ತರುತ್ತದೆ ಎಂದರು.

ಈ ರೀತಿಯ ಆಧಾರ ರಹಿತವಾದ ಆಪಾದನೆಗಳನ್ನು ಮಾಡುವುದರಿಂದ ತಮ್ಮ ಪಕ್ಷದ ಶಾಸಕರ ಮೇಲೆ ಅವರೇ ಅನುಮಾನ ಪಡುವಂತಾಗುತ್ತದೆ. ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ನಾವು ಕೈ ಹಾಕುವುದಿಲ್ಲವೆಂದು ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಿದ್ದೇವೆ. ಆದರೂ, ನಮ್ಮ ವಿರುದ್ಧ ಮುಖ್ಯಮಂತ್ರಿ ವಿನಾಕಾರಣ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಕಿಡಿಗಾರಿದರು.

ಸರಕಾರ ಹಾಗೂ ಮುಖ್ಯಮಂತ್ರಿಯ ಕಾರ್ಯವೈಖರಿಯ ವಿರುದ್ಧ ಮೈತ್ರಿ ಪಕ್ಷಗಳ 15-20 ಶಾಸಕರು ಅಸಮಾಧಾನಗೊಂಡಿದ್ದಾರೆ. ಬಹಿರಂಗವಾಗಿ ಹಲವರು ತಮ್ಮ ಅತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ. ಅವರನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯುವುದನ್ನು ಬಿಟ್ಟು, ನಮ್ಮ ವಿರುದ್ಧ ಆರೋಪಗಳನ್ನು ಮಾಡುವುದರಲ್ಲೇ ಮುಖ್ಯಮಂತ್ರಿ ಕಾಲಹರಣ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ರಾಜ್ಯದಲ್ಲಿ ಮುಂಗಾರು ಆರಂಭವಾಗಿದ್ದರೂ ಶೇ.80ರಷ್ಟು ಭಾಗದಲ್ಲಿ ಮಳೆಯಾಗದೆ ಇರುವುದು ಆತಂಕಕಾರಿ. ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬರಪರಿಹಾರ ಕಾಮಗಾರಿಗಳನ್ನು ಚುರುಕುಗೊಳಿಸಿಲ್ಲ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಅಭಿವೃದ್ಧಿ ಹಾಗೂ ಬರ ಪರಿಹಾರ ಕಾಮಗಾರಿಗಳ ಕಡೆ ಮುಖ್ಯಮಂತ್ರಿ ಗಮನ ಹರಿಸಲಿ, ವಿರೋಧ ಪಕ್ಷವಾಗಿ ನಾವು ಅವರಿಗೆ ಸಹಕಾರ ನೀಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

ಹಿರಿಯ ಶಾಸಕ ಆರ್.ರೋಷನ್ ಬೇಗ್‌ರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿರುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಕಾಂಗ್ರೆಸ್ ಪಕ್ಷದ ಆಂತರಿಕ ವಿಷಯ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಿದ್ದಾರೆ ಎಂಬ ಮಾಹಿತಿಯಿದೆ. ಸಿದ್ದರಾಮಯ್ಯ ವಿರುದ್ಧ ಧ್ವನಿ ಎತ್ತಿದರೆ ಅಮಾನತು ಮಾಡುತ್ತಾರೆ ಎಂದರು.

ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣದಲ್ಲಿ ರೋಷನ್ ಬೇಗ್ ಹೆಸರು ಕೇಳಿ ಬಂದಿದೆ. ಈ ಸಂಸ್ಥೆಯಲ್ಲಿ ಬಡವರು ಹೂಡಿರುವ ಸಾವಿರಾರು ಕೋಟಿ ರೂ.ಗಳನ್ನು ಲೂಟಿ ಮಾಡಿಕೊಂಡು ಗಲ್ಫ್ ರಾಷ್ಟ್ರಗಳಿಗೆ ತೆಗೆದುಕೊಂಡು ಹೋಗಿದ್ದಾರೆ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ನಾವು ಒತ್ತಾಯಿಸಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News