ಎಸೆಸೆಲ್ಸಿ ಮರು ಪರೀಕ್ಷೆ ಬರೆಯಲಿರುವ 1.9 ಲಕ್ಷ ವಿದ್ಯಾರ್ಥಿಗಳು

Update: 2019-06-19 17:05 GMT

ಬೆಂಗಳೂರು, ಜೂ.19: ಎಸೆಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ 1,92,150 ವಿದ್ಯಾರ್ಥಿಗಳು ಜೂ.21ರಿಂದ 28ರವರೆಗೂ ನಡೆಯಲಿರುವ ಮರು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

ರಾಜ್ಯಾದ್ಯಂತ ಒಟ್ಟು 655 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು, 4,665 ಸರಕಾರಿ, 3,139 ಅನುದಾನಿತ, 5,090 ಅನುದಾನರಹಿತ ಶಾಲೆಗಳು ಹಾಗೂ 81,593 ಸರಕಾರಿ, 56,379 ಅನುದಾನಿತ, ಅನುದಾನರಹಿತ 54,178 ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಒಟ್ಟಾರೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 16,001 ಕಡಿಮೆಯಾಗಿದೆ. 655 ಮುಖ್ಯ ಅಧೀಕ್ಷಕರು ಹಾಗೂ 6 ಉಪ ಮುಖ್ಯ ಅಧೀಕ್ಷಕರು ಪರೀಕ್ಷಾ ಕೇಂದ್ರಗಳ ನಿರ್ವಹಣೆ ಮಾಡಲಿದ್ದಾರೆ. ಎಲ್ಲ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ಪಾಲಕರನ್ನು ನೇಮಕ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸ್ಥಾನಿಕ ಜಾಗೃತ ದಳವನ್ನೂ ಒಳಗೊಂಡಂತೆ ತಾಲೂಕು ಮತ್ತು ಜಿಲ್ಲಾ ಹಂತಗಳಲ್ಲಿ ವಿಚಕ್ಷಣ ದಳಗಳು ಕಾರ್ಯನಿರ್ವಹಿಸುತ್ತವೆ.

ಪ್ರಶ್ನೆ ಪತ್ರಿಕೆಗಳ ಸುರಕ್ಷತೆಗೆ ಪ್ರತಿ ಜಿಲ್ಲಾ ಖಜಾನೆಗಳಲ್ಲಿ ಸಿಸಿಟಿವಿ ಮೂಲಕ ನಿರಂತರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಅನುಸರಿಸಬೇಕಾದ ವಿವಿಧ ಸುರಕ್ಷತಾ ಕ್ರಮಗಳನ್ನು ಹಾಗೂ ಚಟುವಟಿಕೆಗಳನ್ನು ಪೋಸ್ಟರ್‌ಗಳ ಮೂಲಕ ಪ್ರಚುರಪಡಿಸಲಾಗಿದೆ. ಪರೀಕ್ಷಾ ಕೊಠಡಿಯೊಳಗೆ ಸ್ಮಾರ್ಟ್ ವಾಚ್ ಮತ್ತು ಮೊಬೈಲ್‌ಗಳನ್ನು ನಿಷೇಧಿಸಲಾಗಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಜುಲೈ 7ರಿಂದ ರಾಜ್ಯದ 9 ಶೈಕ್ಷಣಿಕ ಜಿಲ್ಲೆಗಳ 53 ಮೌಲ್ಯಮಾಪನ ಕೇಂದ್ರಗಳಲ್ಲಿ ಒಟ್ಟು ನೋಂದಾಯಿತ 21,570 ಅರ್ಹ ಮೌಲ್ಯ ಮಾಪಕರುಗಳನ್ನು ನಿಯೋಜಿಸಲಾಗುವುದು.

ಮೌಲ್ಯಮಾಪನದ ನಂತರ ಅಂಕಗಳನ್ನು ಇಂಟರ್‌ನೆಟ್ ಆಧಾರಿತ ತಂತ್ರಾಂಶದ ನೆರವಿನೊಂದಿಗೆ ಮೌಲ್ಯಮಾಪನ ಕೇಂದ್ರಗಳಿಂದ ನೇರವಾಗಿ ಮಂಡಳಿಯ ಸರ್ವರ್‌ಗೆ ವರ್ಗಾಯಿಸಲಾಗುವುದು. ಪ್ರತಿ ಮೌಲ್ಯಮಾಪನ ಕೇಂದ್ರಗಳಲ್ಲಿನ ವಿವಿಧ ಜಾಗಗಳಲ್ಲಿ ಸಿ.ಸಿ.ಟಿ.ವಿ ಅಳವಡಿಸಲಾಗಿದೆ. ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿದ್ದು, ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಕ್ರಮ ವಹಿಸಲಾಗಿದೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

* ವಿದ್ಯಾರ್ಥಿಗಳು- 1,92,150

* ಪರೀಕ್ಷಾ ಕೇಂದ್ರ- 655

* ಮೌಲ್ಯಮಾಪನ ಕೇಂದ್ರ- 53

* ಮೌಲ್ಯ ಮಾಪಕರು- 21,570

* ಜೂ.21ರಿಂದ ಜೂ.28ರವರೆಗೂ ಪರೀಕ್ಷೆ

* ಜುಲೈ 7ರಿಂದ ವೌಲ್ಯಮಾಪನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News