ಮೆರವಣಿಗೆಯಲ್ಲಿದ್ದವರಿಂದ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಆರೋಪ: ಧರಣಿ ಕುಳಿತ ಶಾಸಕ

Update: 2019-06-19 17:07 GMT

ಶಿವಮೊಗ್ಗ, ಜೂ.19: ಜಿಲ್ಲೆಯ ಸಾಗರ ಪಟ್ಟಣದಲ್ಲಿ ಮಂಗಳವಾರ ಸಂಜೆ ಕನ್ನಡ ಸೇನೆ ಸಂಘಟನೆ ಆಯೋಜಿಸಿದ್ದ ಸಂಕಲ್ಪ ಯಾತ್ರೆಯ ಮೆರವಣಿಗೆಯಲ್ಲಿದ್ದ ಕೆಲವರು ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಶಾಸಕ ಹರತಾಳು ಹಾಲಪ್ಪರವರು ಬಿಜೆಪಿ ಪಕ್ಷದ ಕಾರ್ಯಕರ್ತರ ಜೊತೆ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

ಇನ್ನೊಂದೆಡೆ ಕನ್ನಡ ಸೇನೆ ಸಂಘಟನೆ ಕಾರ್ಯಕರ್ತರು ಕೂಡ, ಶಾಸಕರ ವಿರುದ್ದ ಪ್ರತಿ ಧರಣಿ ನಡೆಸಿ, ಘೋಷಣೆ ಕೂಗಿದರು. ತದನಂತರ ಪೊಲೀಸರು ಮಧ್ಯಪ್ರವೇಶಿಸಿ ಎರಡು ಕಡೆಯವರನ್ನು ಸಮಾಧಾನಗೊಳಿಸಿದರು. ಠಾಣೆಯಲ್ಲಿ ಸಂಧಾನ ಸಭೆ ನಡೆಸಿ, ವಿವಾದವನ್ನು ಇತ್ಯರ್ಥಗೊಳಿಸಿದರು.

ಘಟನೆ ಹಿನ್ನೆಲೆ: ಕನ್ನಡ ಸೇನೆ ಮೆರವಣಿಗೆಯು ಪೋಸ್ಟ್ ಆಫೀಸ್ ಸರ್ಕಲ್ ಬಳಿ ಸಾಗುವ ವೇಳೆ, ಅದೇ ದಾರಿಯಲ್ಲಿ ಶಾಸಕ ಹೆಚ್.ಹಾಲಪ್ಪ ಅವರಿದ್ದ ಕಾರು ಆಗಮಿಸಿದೆ. ಮೆರವಣಿಗೆ ಹೋಗುತ್ತಿರುವುದನ್ನು ಗಮನಿಸಿದ ಶಾಸಕರು ಕಾರನ್ನು ನಿಲ್ಲಿಸಿದ್ದಾರೆ.

ಆ ವೇಳೆ ಮೆರವಣಿಗೆಯಲ್ಲಿದ್ದ ಕೆಲವು ಯುವಕರು ಹಾಗೂ ಶಾಸಕರ ಬೆಂಬಲಿಗರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮೆರವಣಿಗೆಯಲ್ಲಿದ್ದ ಕೆಲವರು ಶಾಸಕರ ವಿರುದ್ಧ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ ಎನ್ನಲಾಗಿದೆ.

ಇದರಿಂದ ಆಕ್ರೋಶಗೊಂಡ ಶಾಸಕ ಹಾಲಪ್ಪ, ಮತ್ತವರ ಬೆಂಬಲಿಗರು ಪೊಲೀಸ್ ಠಾಣೆ ಎದುರಿನ ರಸ್ತೆಯಲ್ಲಿಯೇ ಧರಣಿ ನಡೆಸಿದ್ದಾರೆ. ತಮ್ಮನ್ನು ನಿಂದಿಸಿದ ಆರೋಪಿಗಳನ್ನು ತತ್‍ಕ್ಷಣವೇ ಬಂಧಿಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ. ಮತ್ತೊಂದೆಡೆ ಹಾಲಪ್ಪರವರ ವಿರುದ್ಧ ಕನ್ನಡ ಸೇನೆ ಕಾರ್ಯಕರ್ತರು ಪ್ರತಿ ಧರಣಿ ನಡೆಸಿದರು. ಶಾಸಕರು ಕನ್ನಡ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ತದನಂತರ ಪೇಟೆ ಠಾಣೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ಶಾಸಕರು ಹಾಗೂ ಸಂಘಟನೆಯ ಪ್ರಮುಖರ ಜೊತೆ ಮಾತುಕತೆ ನಡೆಸಿದರು. ಎರಡೂ ಕಡೆಯವರ ಅಹವಾಲು ಆಲಿಸಿದರು. ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News