ನಕಲಿ ಲೆಟರ್ ಹೆಡ್ ಸೃಷ್ಟಿಸಿ ಬ್ಯಾಂಕ್‍ಗೆ 50 ಲಕ್ಷ ರೂ. ವಂಚನೆಗೆ ಯತ್ನ: ಎಫ್‍ಐಆರ್ ದಾಖಲು

Update: 2019-06-19 17:12 GMT

ಶಿವಮೊಗ್ಗ, ಜೂ. 19: ಡಿ.ಸಿ.ಸಿ. ಬ್ಯಾಂಕ್‍ನ ನಕಲಿ ಇ-ಮೇಲ್ ಐ.ಡಿ. ಹಾಗೂ ಲೆಟರ್ ಹೆಡ್ ಸೃಷ್ಟಿಸಿ 50 ಲಕ್ಷ ರೂ. ವಂಚಿಸಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಘಟನೆ ವರದಿಯಾಗಿದೆ.

ಘಟನೆ ಹಿನ್ನೆಲೆ: ಶಿವಮೊಗ್ಗ ನಗರದಲ್ಲಿರುವ ಡಿ.ಸಿ.ಸಿ. ಬ್ಯಾಂಕ್ ಮುಖ್ಯ ಶಾಖೆಯ ಅಧಿಕೃತ ಇ-ಮೇಲ್ ಐ.ಡಿ.ಗೆ, ದಿನಾಂಕ 7-6-2019 ರಂದು ಮಧ್ಯಾಹ್ನ 2.55 ಕ್ಕೆ ಭದ್ರಾವತಿಯ ಶಾಖೆಯ ಲೆಟರ್ ಹೆಡ್ ಹಾಗೂ ಶಾಖಾ ವ್ಯವಸ್ಥಾಪಕ ಸೀಲು ಮತ್ತು ಸಹಿ ಇರುವ ಪತ್ರವೊಂದು ಬಂದಿತ್ತು.

ಇದರಲ್ಲಿ 50 ಲಕ್ಷ ರೂ.ಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವಂತೆ ಕೋರಿಕೆ ಸಲ್ಲಿಸಲಾಗಿತ್ತು. ಮುಖ್ಯ ಶಾಖೆಯ ಸದರಿ ಅಧಿಕಾರಿಯು ಅನುಮಾನದ ಮೇಲೆ ಭದ್ರಾವತಿ ಶಾಖೆಯ ವ್ಯವಸ್ಥಾಪಕರನ್ನು ಸಂಪರ್ಕಿಸಿ ನಗದು ಕೋರಿಕೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ವ್ಯವಸ್ಥಾಪಕರು ತಾವು ಯಾವುದೇ ರೀತಿಯ ನಗದು ಕೋರಿಕೆ ಪತ್ರ ಇ-ಮೇಲ್ ಮೂಲಕ ಕಳುಹಿಸಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

'ವಿವಿಧ ಶಾಖೆಗಳ ಕೋರಿಕೆಯಂತೆ ಬ್ಯಾಂಕ್‍ನಿಂದ ದಿನಂಪ್ರತಿ ನಗದು ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಈ ಮಾಹಿತಿ ಅರಿತಿದ್ದವರು ಶಾಖೆಯ ಈ ಹಿಂದಿನ ಪತ್ರದ ನಕಲನ್ನು ತಿದ್ದುಪಡಿ ಮಾಡಿದ್ದಾರೆ. ನಂತರ ನಕಲಿ ಇ-ಮೇಲ್ ಐ.ಡಿ. ಮಾಡಿಕೊಂಡು ತಮ್ಮ ಬ್ಯಾಂಕ್‍ನಿಂದ ಹಣ ವಂಚಿಸಲು ಯತ್ನಿಸಿದ್ದಾರೆ' ಎಂದು ಡಿ.ಸಿ.ಸಿ. ಬ್ಯಾಂಕ್ ಪ್ರಧಾನ ಕಚೇರಿಯ ವ್ಯವಸ್ಥಾಪಕ ನಿರ್ದೇಶಕರಾದ ರಾಜಣ್ಣ ರೆಡ್ಡಿಯವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ದೂರಿನ ಆಧಾರದ ಮೇಲೆ ಸಿಇಎನ್ ಠಾಣೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ವಂಚನೆಗೆ ಯತ್ನಿಸಿದವರ ಪತ್ತೆಗೆ ತನಿಖೆ ತೀವ್ರಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News