'ವೀರಶೈವ-ಲಿಂಗಾಯತ' ಹಿಂದುಳಿದ ವರ್ಗಕ್ಕೆ ಸೇರಿಸಲು ಕೇಂದ್ರದ ಮೇಲೆ ಒತ್ತಡ: ಶಾಮನೂರು ಶಿವಶಂಕರಪ್ಪ

Update: 2019-06-19 17:22 GMT

ಬೆಂಗಳೂರು, ಜೂ.19: ವೀರಶೈವ-ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕೆನ್ನುವ ಒತ್ತಡವನ್ನು ಕೇಂದ್ರ ಸರಕಾರದ ಮೇಲೆ ತರಲಿದ್ದೇವೆ ಎಂದು ಮಾಜಿ ಸಚಿವ, ಸಮುದಾಯದ ಹಿರಿಯ ಮುಖಂಡ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರು ಹೇಳಿದ್ದಾರೆ.

ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಲಾಗಿದ್ದ ವೀರಶೈವ-ಲಿಂಗಾಯತ ಸಮುದಾಯದ ಸಭೆಯಲ್ಲಿ ಭಾಗವಹಿಸಿದ ಬಳಿಕ ಹೊರ ಬಂದು ಮಾತನಾಡಿದ ಅವರು, ಲಿಂಗಾಯತ ಸಮುದಾಯದ ನಿಗಮ ಸ್ಥಾಪನೆ ಸಂಬಂಧ ಗುರುವಾರ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಲಿದ್ದೇನೆ. ಅದರ ಜೊತೆಗೆ ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ತರಲಿದ್ದೇವೆ ಎಂದು ಹೇಳಿದರು.

ಗೃಹ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ನಮ್ಮ ಲಿಂಗಾಯತರಲ್ಲಿರುವ ಬಡವರ ಏಳಿಗೆಗಾಗಿ ಏನೆಲ್ಲಾ ಮಾಡಬೇಕು ಅನ್ನುವುದರ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಹೇಳಿದರು.

ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಸಮುದಾಯದಲ್ಲಿನ ಜನರ, ಯುವಕರ, ಮುಖಂಡರ ಬೇಡಿಕೆಗಳ ಬಗ್ಗೆ ಚರ್ಚೆ ನಡೆದಿದ್ದು, ಸಮುದಾಯದ ಕಟ್ಟಕಡೆಯ ವ್ಯಕ್ತಿಯೂ ಆರ್ಥಿಕವಾಗಿ ಶೈಕ್ಷಣಿಕವಾಗಿ ಬಲಿಷ್ಠವಾಗಬೇಕಿದೆ ಎಂದು ಹೇಳಿದರು. ಸಮುದಾಯದ ಬಡವರ ಬೇಡಿಕೆಗಳ ಬಗ್ಗೆ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಚರ್ಚೆಯಾಗಿದೆ ಎಂದು ಹೇಳಿದರು. ಸಭೆಯಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಮುಖಂಡರು, ಶಾಸಕರು, ಸಚಿವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News