ಸಿಇಟಿ-2019: ಮೂಲ ದಾಖಲೆಗಳ ಪರಿಶೀಲನೆ ಅವಧಿ ವಿಸ್ತರಣೆ

Update: 2019-06-19 17:26 GMT

ಬೆಂಗಳೂರು, ಜೂ.19: ಸಿಇಟಿ-2019ನೇ ಸಾಲಿನ ದಾಖಲಾತಿ ಪರಿಶೀಲನೆಯು ನಿಗದಿತ ವೇಳಾಪಟ್ಟಿಯಂತೆ ಜೂ.19ರಂದು ಮುಕ್ತಾಯವಾಗಿದೆ. ಅಭ್ಯರ್ಥಿಗಳ ಹಿತದೃಷ್ಟಿಯಿಂದ ದಾಖಲಾತಿ ಪರಿಶೀಲನೆಯ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

ಇಲ್ಲಿಯವರೆಗೆ ದಾಖಲಾತಿ ಪರಿಶೀಲನೆಗೆ ಹಾಜರಾಗದೇ ಇರುವ ಅರ್ಹ ಅಭ್ಯರ್ಥಿಗಳು ಜೂ.20ರಂದು ಯಾವುದಾದರೂ ಸಹಾಯಕ ಕೇಂದ್ರದಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ. ದಾಖಲೆ ಪರಿಶೀಲನೆಯಾದ ನಂತರವೇ ಅಭ್ಯರ್ಥಿಗಳು ಸೀಟು ಹಂಚಿಕೆಗೆ ಇಚ್ಛೆ, ಆಯ್ಕೆಯನ್ನು ನಮೂದಿಸಲು ಅರ್ಹತೆಯನ್ನು ಪಡೆಯುತ್ತಾರೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ಗೆ ಭೇಟಿ ನೀಡಬಹುದಾಗಿದೆ.

ದಾಖಲಾತಿ ಪರಿಶೀಲನಾ ವೇಳಾಪಟ್ಟಿ: 2019ನೇ ಸಾಲಿಗೆ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ದಾಖಲಾತಿ ಪರಿಶೀಲನೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಜೂ.21 ಮತ್ತು 22ರಂದು ಕರ್ನಾಟಕದ ಅಭ್ಯರ್ಥಿಗಳಿಗೆ ಹಾಗೂ ಜೂ.24ರಿಂದ ಕರ್ನಾಟಕೇತರ ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನೆಯನ್ನು ನಡೆಸಲಾಗುವುದು. ವಿವರವಾದ ವೇಳಾಪಟ್ಟಿಯನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದೆ.

ಕರ್ನಾಟಕದ ಅಭ್ಯರ್ಥಿಗಳು ಈಗಾಗಲೇ ದಾಖಲಾತಿ ಪರಿಶೀಲನೆಯನ್ನು ಪೂರ್ಣಗೊಳಿಸಿದ್ದರೆ ಮತ್ತೊಮ್ಮೆ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸುಗಳ ದಾಖಲಾತಿ ಪರಿಶೀಲನೆಗೆ ಹಾಜರಾಗುವಂತಿಲ್ಲ. ಆದರೆ, ಏನಾದರೂ ಬದಲಾವಣೆ ಮಾಡಿಕೊಂಡಲ್ಲಿ ಅಥವಾ ಭಾಷಾ ಅಲ್ಪಸಂಖ್ಯಾತರ (Linguistic Minority) ಸೀಟುಗಳನ್ನು ಅಥವಾ ಧಾರ್ಮಿಕ ಅಲ್ಪಸಂಖ್ಯಾತರು ಅಥವಾ ಅನಿವಾಸಿ ಭಾರತೀಯ ವಾರ್ಡ್ ಸೀಟು (Religious Minority or NRI ward seats) ಗಳನ್ನು ಅಥವಾ ಬೆಂಗಳೂರಿನ ಸಂತ ಜಾನ್ ವೈದ್ಯಕೀಯ ಕಾಲೇಜು (ಪ್ರವರ್ಗ-2 ಇಂದ ಪ್ರವರ್ಗ-8)ನಲ್ಲಿ ನಿರ್ದಿಷ್ಟ ಸೀಟುಗಳನ್ನು ಪಡೆಯಲು ಅರ್ಹರಿದ್ದಲ್ಲಿ ಕೆಇಎ ವೆಬ್‌ಪೋರ್ಟಲ್‌ನಲ್ಲಿ ನಿಗದಿತ ಲಿಂಕ್ ಅನ್ನು ಆಯ್ಕೆ ಮಾಡಿ ಬದಲಾವಣೆಯನ್ನು ಮಾಡಿ ನಂತರ ಎಲ್ಲ ಅಗತ್ಯ ಮೂಲ ದಾಖಲೆಗಳೊಂದಿಗೆ ನೀಟ್ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು.

ಹೆಚ್ಚಿನ ವಿವರಗಳಿಗಾಗಿ ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ಅನ್ನು ಪರಿಶೀಲಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News