ಇಂಗ್ಲಿಷ್ ನಲ್ಲಿ ಪ್ರಮಾಣ ವಚನ: ಕೇಂದ್ರ ಸಚಿವ ಸುರೇಶ್ ಅಂಗಡಿ ನಿವಾಸಕ್ಕೆ ಮುತ್ತಿಗೆ

Update: 2019-06-19 17:36 GMT
ಚಿತ್ರ ಕೃಪೆ: ANI

ಬೆಳಗಾವಿ, ಜೂ. 19: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಸಂಸತ್‌ನಲ್ಲಿ ಆಂಗ್ಲಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ವಿರೋಧಿಸಿ ಕರವೇ ಕಾರ್ಯಕರ್ತರು ಬುಧವಾರ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಚೆನ್ನಮ್ಮ ವೃತ್ತದಿಂದ ರ‍್ಯಾಲಿ ನಡೆಸಿ ಕಾರ್ಯಕರ್ತರು ಕೇಂದ್ರ ಸಚಿವರ ಪ್ರತಿಕೃತಿ ದಹಿಸಿದರು. ಆ ಬಳಿಕ ಸದಾಶಿವನಗರದಲ್ಲಿನ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಕೂಡಲೇ ಅವರು ಸಾರ್ವಜನಿಕ ಕ್ಷಮೆ ಕೋರಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.

ಇದೇ ವೇಳೆ ಸಂಸದ ಅನಂತಕಮಾರ್ ಹೆಗಡೆ ಅವರು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಕ್ಕೆ ಆಕ್ಷೇಪಿಸಿದ ಕಾರ್ಯಕರ್ತರು, ಅವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಜತೆ ಸುರೇಶ್ ಅಂಗಡಿ ಅನೈತಿಕ ಮೈತ್ರಿ ಮಾಡಿಕೊಂಡಿದ್ದಾರೆಂದು ದೂರಿದರು.

ಕನ್ನಡಿಗರ ಮತದಿಂದ ಆಯ್ಕೆಯಾಗಿರುವ ಸುರೇಶ್ ಅಂಗಡಿ ಮತ್ತು ಅನಂತಕುಮಾರ್ ಹೆಗಡೆ ಕರ್ನಾಟಕ ಜನ ಮತ್ತು ಭಾಷೆಗೆ ಅಪಮಾನ ಮಾಡಿದ್ದಾರೆ. ಹೀಗಾಗಿ ಅವರುಗಳು ಕೂಡಲೇ ಕನ್ನಡಿಗರ ಬಹಿರಂಗ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಸುರೇಶ್ ಅಂಗಡಿ ಪ್ರತಿಕೃತಿ ದಹನ ಸಂಬಂಧ ಪೊಲೀಸರು ಮತ್ತು ಕರವೇ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ಮತ್ತು ವಾಗ್ವಾದ ನಡೆಯಿತು. ಅಂಗಡಿ ನಿವಾಸಕ್ಕೆ ಮುತಿಗೆ ಹಾಕಲು ಮುಂದಾದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು.

‘ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಎಲ್ಲ ಸಂಸದರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ, ಸುರೇಶ್ ಅಂಗಡಿ ಮತ್ತು ಅನಂತ್ ಕುಮಾರ್ ಹೆಗಡೆ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡದೆ ಕನ್ನಡಕ್ಕೆ ಅವಮಾನ ಮಾಡಿದ್ದು ಅಕ್ಷಮ್ಯ. ಕೂಡಲೇ ಅವರಿಬ್ಬರು ಕನ್ನಡಿಗರ ಕ್ಷಮೆ ಕೇಳಬೇಕು’

-ದೀಪಕ್, ಕರವೇ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News