ಅಂಬೇಡ್ಕರ್ ಸಂವಿಧಾನದಿಂದ ಮಾತ್ರ ದೇಶದ ಏಳಿಗೆ ಸಾಧ್ಯ: ಜ್ಞಾನಪ್ರಕಾಶ್ ಸ್ವಾಮೀಜಿ

Update: 2019-06-19 18:24 GMT

ಚಿಕ್ಕಮಗಳೂರು, ಜೂ.19: ದೇಶದ ಸಂಸತ್ತು ಯಾರ ಖಾಸಗಿ ಆಸ್ತಿಯಲ್ಲ. ಸಂಸತ್ ಯಾವ ಜಾತಿ, ಧರ್ಮಕ್ಕೂ ಸೇರಿದ್ದಲ್ಲ. ಜೈಶ್ರೀರಾಮ್‍ನಂತಹ ಘೋಷಣೆಗಳನ್ನು ಅಗತ್ಯವಿದ್ದಲ್ಲಿ ತಂತಮ್ಮ ಮನೆಗಳಲ್ಲಿ ಕೂಗಿಕೊಳ್ಳಲಿ. ಜೈಶ್ರೀರಾಮ್ ಘೋಷಣೆ ಕೂಗುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು, ದೇಶದ ಜನರಿಂದ ಆಯ್ಕೆಯಾದ ಸಂಸದರು ಸಂತ್ತಿನೊಳಗೆ ಹೀಗೆ ಘೋಷಣೆ ಕೂಗಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ, ಅಪರಾಧವಾಗಿದೆ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಅಭಿಪ್ರಾಯಿಸಿದ್ದಾರೆ.

ಬುಧವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಸಂವಿಧಾನ ಉಳಿಸಿ ಹೋರಾಟ ಸಮಿತಿ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ, ಮುಖ್ಯಮಂತ್ರಿ, ರಾಷ್ಟ್ರಪತಿ, ಶ್ರೀಮಂತ, ಬಡವ ಸೇರಿದಂತೆ ದೇಶದ ಪ್ರತಿಯೊಬ್ಬರೂ ಸಂವಿಧಾನದ ಅಡಿಯಾಳುಗಳಾಗಿದ್ದಾರೆ. ಇವರೆಲ್ಲರನ್ನೂ ರಕ್ಷಿಸುವುದು ಸಂವಿಧಾನವೇ ಹೊರತು ಯಾವುದೇ ದೇವರಲ್ಲ. ಸಂವಿಧಾನವನ್ನು ಬದಲಾಯಿಸುವುದು ಎಂದರೆ ಭಾರತವನ್ನೇ ಬದಲಾಯಿಸಿದಂತೆ. ಸಂವಿಧಾನ ಉಳಿದರೆ ಮಾತ್ರ ಭಾರತ ಉಳಿಯುತ್ತದೆ, ದೇವರೂ ಉಳಿಯುತ್ತಾನೆ ಎಂದರು.

ದೇವರು, ಧರ್ಮಗಳ ಹೆಸರಿನಲ್ಲಿ ಒಡೆದು ಛಿದ್ರವಾಗಿದ್ದ ದೇಶವನ್ನು ಒಗ್ಗೂಡಿಸಿರುವುದೇ ಸಂವಿಧಾನ. ದೇಶದ ಸಾರ್ವಭೌಮತ್ವ, ಸಹೋದರತೆ, ಅಖಂಡತೆಯನ್ನು ಎತ್ತಿಹಿಡಿದಿರುವುದೇ ಸಂವಿಧಾನ. ಅಂಬೇಡ್ಕರ್ ಸಂವಿಧಾನವನ್ನು ಸುಡುವುದು, ಬದಲಾಯಿಸುವುದು ಯಾರಿಂದಲೂ ಸಾಧ್ಯವಿಲ್ಲ ಸಂವಿಧಾನವಿಲ್ಲದಿದ್ದರೇ ಮೋದಿಯಂತವರೂ ಪ್ರಧಾನಿಯಾಗಲಾರರು. ಅಂಬೇಡ್ಕರ್ ಅವರನ್ನು ಜಾತಿಯ ಚೌಕಟ್ಟಿಗೆ ಸೀಮಿತಗೊಳಿಸುವ ಹುನ್ನಾರ ಇತ್ತೀಚೆಗೆ ಹೆಚ್ಚುತ್ತಿದೆ ಎಂದು ವಿಷಾದಿಸಿದ ಜ್ಞಾನಪ್ರಕಾಶ್್ ಸ್ವಾಮೀಜಿ, ಅಂಬೇಡ್ಕರ್ ಅವರು ಸಂವಿಧಾನ ಎಂಬ ಆಕ್ಸಿಜನ್ ದೇಶಕ್ಕೆ ನೀಡಿದ್ದಾರೆ. ದೇಶದ ಎಲ್ಲ ರೀತಿಯ ಅಸಮಾನತೆ, ದೌರ್ಜಜ್ಯ, ಶೋಷಣೆ, ಮೌಢ್ಯಗಳಿಗೆ ಸಂವಿಧಾನವೇ ಪರಿಹಾರವಾಗಿದೆ. ಸಂವಿಧಾನ ಯಥಾವತ್ ಜಾರಿಯಾದಾಗ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.

ರಾಮಾಯಣ ಬರೆದಿದ್ದು ವಾಲ್ಮೀಕಿ, ಮಹಾಭಾರತ ರಚಿಸಿದ್ದ ವ್ಯಾಸ. ಈ ಮಹಾಗ್ರಂಥಗಳನ್ನು ಬರೆದವರು ಶೂದ್ರರಾಗಿದ್ದಾರೆ. ದೇಶದ ಮತ್ತೊಂದು ಮಹಾಗ್ರಂಥವಾದ ಸಂವಿಧಾನವನ್ನು ಬರೆದ ಅಂಬೇಡ್ಕರ್ ಕೂಡ ಶೂದ್ರರೇ ಆಗಿದ್ದಾರೆ. ದಲಿತ, ಶೋಷಿತ ಸಮುದಾಯಗಳು ಒಗ್ಗೂಡಿದಾಗ ಯಾವ ಪಟ್ಟಭದ್ರರ ಹುನ್ನಾರವೂ ಯಶಸ್ಸು ಕಾಣಲು ಸಾಧ್ಯವಿಲ್ಲ. ಅಂಬೇಡ್ಕರ್ ಸಂವಿಧಾನದಿಂದ ಮಾತ್ರ ದೇಶದ ಉಜ್ವಲ ಭವಿಷ್ಯ ಅರಳಲು ಸಾಧ್ಯ. ಅದನ್ನು ಬದಲಾಯಿಸಲು ಕೈ ಹಾಕುವವರು ಕೈ ಸುಟ್ಟುಕೊಳ್ಳುತ್ತಾರೆಂದು ಎಚ್ಚರಿಸಿದ ಅವರು, ಅಂಬೇಡ್ಕರ್ ಜಯಂತಿ ಆಚರಣೆ ಹೂಗುಚ್ಛ ನೀಡಲು, ಬಿರಿಯಾನಿ ತಿನ್ನಲು ಸೀಮಿತವಾಗಬಾರದು. ಅವರ ಜಯಂತಿ ಆಚರಣೆ ಕಾರ್ಯಕ್ರಮಗಳ ಮೂಲಕ ವಿಚಾರ ಕ್ರಾಂತಿಯಾಗಬೇಕು ಎಂದರು.

ಅಂಬೇಡ್ಕರ್ ಅವರು ದೇಶ ಕಟ್ಟಿದ್ದು ಪೆನ್‍ನಿಂದಲೇ ಹೊರತು, ಗನ್‍ನಿಂದಲ್ಲ. ಪ್ರಸಕ್ತ ದೇಶ ಪೆನ್‍ಗಳ ಭಾರತ ಆಗಬೇಕಿದೆ. ಗನ್‍ಗಳ ಭಾರತ ಅಲ್ಲ ಎಂದ ಅವರು, ದೇಶಾದ್ಯಂತ ಸತ್ಯ ಹೇಳುವವರನ್ನು, ಸರಕಾರದ ತಪ್ಪನ್ನು ಟೀಕಿಸುವವರನ್ನು, ದೌರ್ಜನ್ಯ, ಅಸಮಾನತೆ ವಿರುದ್ಧ ಧ್ವನಿ ಎತ್ತುವವರನ್ನು ಗನ್‍ಗಳ ಮೂಲಕ ಬೆದರಿಸುವ, ಹತ್ಯೆ ಮಾಡುವ, ಜಾತಿ, ಧರ್ಮದ ಹೆಸರಿನಲ್ಲಿ ಬಟ್ಟೆ ಬಿಚ್ಚಿ ಬೆತ್ತಲು ಮಾಡುವ ಸಂಸ್ಕೃತಿ ಬೆಳೆಯುತ್ತಿದೆ. ಇದರೊಂದಿಗೆ ಮೇರಾ ಭಾರತ್ ಮಹಾನ್ ಎನ್ನಲಾಗುತ್ತಿದೆ. ದೇಶದ ಪ್ರತಿಯೊಬ್ಬರ ಮಾತು, ಭಾವನೆಗಳಿಗೂ ಗೌರವ ಸಿಕ್ಕಿದಾಗ ಮಾತ್ರ ಮೇರಾ ಭಾರತ್ ಮಹಾನ್ ಆಗಲಿದೆ. ಇದು ಅಂಬೇಡ್ಕರ್ ಸಂವಿಧಾನದಿಂದ ಮಾತ್ರ ಸಾಧ್ಯ ಎಂದು ಜ್ಞಾನಪ್ರಕಾಶ್್ ಸ್ವಾಮೀಜಿ ತಿಳಿಸಿದರು.

ಚಿಂತಕ, ಸಾಹಿತಿ ಶಹರಿಯಾರ್ ಖಾನ್, ಪ್ರಗತಿಪರ ಚಿಂತಕ ಹಾಗೂ ವಕೀಲ ಅನಂತ್ ನಾಯಕ್, ಸಂವಿಧಾನ ಉಳಿಸಿ ಹೋರಾಟ ಸಮಿತಿಯ ಗೌಸ್ ಮೊಹಿದ್ದಿನ್, ರೈತ ಸಂಘದ ಕೃಷ್ಣೇಗೌಡ ಮತ್ತಿತರರು ಮಾತನಾಡಿದರು. ದಸಂಸ ಮುಖಂಡ ರಾಜರತ್ನಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ವಸಂತ್‍ಕುಮಾರ್, ರುದ್ರಯ್ಯ, ಕೃಷ್ಣಮೂರ್ತಿ, ಯಲಗುಡಿಗೆ ಹೊನ್ನಪ್ಪ, ಅಝ್ಮಲ್ ಪಾಶ, ಚಾಂದ್‍ಪಾಶ, ರಾಜಾಶಂಕರ್, ನಾಸಿರ್ ಸೇರಿ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ನಗರದ ಮುಖ್ಯ ರಸ್ತೆಗಳಲ್ಲಿ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.

ಸ್ವಾತಂತ್ರ್ಯ ನಂತರದಲ್ಲಿ ದೇಶದಲ್ಲಿ ದಲಿತರ, ಹಿಂದುಳಿದ ವರ್ಗದವರ, ಅಲ್ಪಸಂಖ್ಯಾತರ ವಿಮೋಚನೆ ಅಂಬೇಡ್ಕರ್ ಸಂವಿಧಾನದಿಂದ ಸಾಧ್ಯವಾಯಿತು. ಹಾಗಾಗಿ ಅಂಬೇಡ್ಕರ್ ದೇಶದ ಎಲ್ಲ ಸಮುದಾಯಗಳ ಆಸ್ತಿ, ಶಕ್ತಿಯಾಗಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಟಿಪ್ಪು ಸುಲ್ತಾನ್ ದಲಿತರ ವಿಮೋಚನೆಗಾಗಿ ಶ್ರಮಿಸಿದ್ದಾನೆ. ಬ್ರಿಟಿಷರಿಗೆ ದೇಶದ 563 ರಾಜರು ಮಂಡಿಯೂರಿದ್ದ ಕಾಲಘಟ್ಟದಲ್ಲಿ ಟಿಪ್ಪು ಸುಲ್ತಾನ್ ಮಾತ್ರ ಸೆಟೆದು ನಿಂತು ಹುತಾತ್ಮನಾದ. ದಲಿತರಿಗೆ ಸಾವಿರಾರು ಎಕರೆ ಭೂಮಿ ನೀಡಿದ್ದಲ್ಲದೇ ಮಹಿಳೆಯರು ಸೊಂಟದ ಮೇಲೆ ಬಟ್ಟೆ ಧರಿಸಬಾರದೆಂದು ಮಲಬಾರಿನ ರಾಜನ ವಿರುದ್ಧ ಸಮರ ಸಾರಿ ದಲಿತ ಮಹಿಳೆಯರ ವಿಮೋಚನೆಗೆ ನಾಂದಿ ಹಾಡಿದ್ದ, ಸಾವಿರಾರು ದೇವಾಲಯಗಳಿಗೆ ದಾನ, ಧರ್ಮ ಮಾಡಿದ್ದ. ಈ ಕಾರಣಕ್ಕೆ ಟಿಪ್ಪು ಸುಲ್ತಾನ್ ಕೇವಲ ಮುಸ್ಲಿಂ ಸಮುದಾಯದವರಿಗೆ ಸೇರಿದವನ್ನಲ್ಲ. ಆತ ಇಡೀ ದೇಶಕ್ಕೆ ಸೇರಿದ ಸಮಾಜ ಸುಧಾರಕನಾಗಿದ್ದಾನೆ.

- ಜ್ಞಾನಪ್ರಕಾಶ್ ಸ್ವಾಮೀಜಿ

ಮಂತ್ರ, ಪೂಜೆ ಮಾಡುವುದರಿಂದ ಮಳೆ ಬರುವುದಾಗಿದ್ದಾರೆ, ಮಂತ್ರದಿಂದಲೇ ಪಾಕಿಸ್ಥಾನವನ್ನು ನಾಶ ಮಾಡಬಹುದಿತ್ತು. ಪುಲ್ವಾಮ ದಾಳಿಕೋರನನ್ನು ಸದೆ ಬಡಿಯಬಹುದಿತ್ತು. ಮಂತ್ರ, ಹೋಮ, ಹವನದಿಂದ ಮಳೆ ಬರುವುದಿಲ್ಲ. ಸಮ್ಮಿಶ್ರ ಸರಕಾರ ಪರ್ಜನ್ಯ ಹೋಮ ಮಾಡಲು ಮುಜರಾಯಿ ದೇವಾಲಯಗಳಿಗೆ ಆದೇಶ ನೀಡುವ ಮೂಲಕ ಅಜ್ಞಾನಿಗಳ ಸರಕಾರ ಎಂಬುದುನ್ನು ರುಜುವಾತು ಮಾಡಿದೆ. ಸರಕಾರದ ಹಣ ಜನರಿಗೆ ಸೇರಿದ್ದಾಗಿದೆ. ದೇಶದ ಕಾನೂನಿನಂತೆ ಆ ಹಣವನ್ನು ಜನರ ಕಲ್ಯಾಣಕ್ಕೆ ಬಳಸಬೇಕೇ ಹೊರತು, ಮೌಢ್ಯವನ್ನು ಬಿತ್ತಲು ಬಳಸಬಾರದು. ಹೀಗೆ ಮಾಡಿರುವುದು ಸಿಎಂ ಕುಮಾರಸ್ವಾಮಿ ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ.
- ಜ್ಞಾನಪ್ರಕಾಶ್ ಸ್ವಾಮೀಜಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News