ಲಿಂಗನಮಕ್ಕಿ ಜಲಾಶಯದಿಂದ ನೀರು ತರಲು ಡಿಪಿಆರ್: ಡಾ.ಜಿ.ಪರಮೇಶ್ವರ್

Update: 2019-06-20 13:11 GMT

ಬೆಂಗಳೂರು, ಜೂ.20: ಬೆಂಗಳೂರು ನಗರಕ್ಕೆ ಲಿಂಗನಮಕ್ಕಿ ಜಲಾಶಯದಿಂದ ನೀರು ತರುವ ಬೃಹತ್ ಯೋಜನೆಗೆ ಡಿಪಿಆರ್ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಬೆಂಗಳೂರು ನಗರದ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಲಿಂಗನಮಕ್ಕಿ ಜಲಾಶಯದಿಂದ ನೀರನ್ನು ತರುವ ಯೋಜನೆ ರೂಪುರೇಷೆಗಳ ಕುರಿತು ಗುರುವಾರ ನಗರದ ಬಿಎಂಆರ್‌ಡಿಎ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಪ್ರಸ್ತುತ ಕಾವೇರಿಯಿಂದ 1400 ಎಂಎಲ್‌ಡಿ ನೀರನ್ನು ನಗರಕ್ಕೆ ಹರಿಸಲಾಗುತ್ತಿದೆ. ಆದರೂ ನಗರದಲ್ಲಿ ನೀರಿನ ಸಮಸ್ಯೆ ಇದೆ. ಕೆಲವೆಡೆ ಕಾವೇರಿ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಕಾವೇರಿ ಐದನೇ ಹಂತದ ಯೋಜನೆಯಿಂದ ಹೆಚ್ಚೆಂದರೆ 800 ಎಂಎಲ್‌ಡಿ ನೀರು ತರಬಹುದು. ಆದರೂ ನೀರಿನ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಅವರು ಹೇಳಿದರು.

ಪ್ರಸ್ತುತ ಕಾವೇರಿ ಮೊದಲ ಹಾಗೂ ಎರಡನೇ ಹಂತದಿಂದಲೂ ನೀರಿನ ಪ್ರಮಾಣ ಇಳಿಕೆಯಾಗಿದೆ. ಹೀಗಾಗಿ ಇತರೆ ಮೂಲಗಳಿಂದ ನೀರು ತರುವ ಅನಿವಾರ್ಯತೆ ಇದೆ. ಈ ಹಿಂದೆ ತ್ಯಾಗರಾಜ್ ಸಮಿತಿಯು ಲಿಂಗನಮಕ್ಕಿಯಿಂದಲೂ ನೀರು ಹರಿಸಬಹುದು ಎಂದು ವರದಿ ನೀಡಿದ್ದರು. ಈ ವರದಿಯನ್ನು ಅಧ್ಯಯನ ನಡೆಸಿ ನೀರು ತರುವ ಸಾಧ್ಯತೆಯನ್ನು ಕಂಡುಕೊಳ್ಳಲಾಗಿದೆ. ಹೀಗಾಗಿ ಡಿಪಿಆರ್ ಮಾಡಲು ಸೂಚಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.

ಡಿಪಿಆರ್ ಬಳಿಕ ಯೋಜನೆಯ ಸಾಧಕ ಬಾಧಕವನ್ನು ಪರಿಶೀಲಿಸಲಾಗುವುದು. ಪರಿಸರ, ನೀರು ಪಂಪ್ ಮಾಡಲು ಇರುವ ಸವಾಲುಗಳ ಬಗ್ಗೆ ಅವಲೋಕಿಸ ಲಾಗುವುದು. ಲಿಂಗನಮಕ್ಕಿಯು ಬೆಂಗಳೂರಿಗೆ 300 ಕಿ.ಮೀ. ದೂರವಿದೆ. 12 ಸಾವಿರ ಕೋಟಿ ರೂ.ವೆಚ್ಚ ಆಗಬಹುದೆಂದು ಅಂದಾಜಿಸಲಾಗಿದೆ. ಆದರೆ ವೆಚ್ಚದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಮೊದಲ ಹಂತದಲ್ಲಿ 10 ಟಿಎಂಸಿ ನೀರನ್ನು ತರಲು ಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಎತ್ತಿನಹೊಳೆ ಯೋಜನೆ ಮೂಲಕ 2.5 ಟಿಎಂಸಿ ನೀರು ತರಲಾಗುತ್ತದೆ. ಇಷ್ಟು ಬೆಂಗಳೂರಿಗೆ ಸಾಲದು. ಹೀಗಾಗಿ ಲಿಂಗನಮಕ್ಕಿಯಿಂದಲೂ ನೀರು ತರಲು ಯೋಜಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರಾದ ಬಿ.ಎ.ಬಸವರಾಜ, ಪ್ರಸಾದ್ ಅಬ್ಬಯ್ಯ, ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಮುದ್ರದ ಪಾಲಾಗುತ್ತಿರುವ ನೀರು

ಲಿಂಗನಮಕ್ಕಿ ಕೇವಲ ವಿದ್ಯುತ್ ಉತ್ಪಾದನೆಗಷ್ಟೇ ಬಳಕೆಯಾಗುತ್ತಿದೆ. ಬಳಿಕ ಈ ನೀರು ಸಮುದ್ರದ ಪಾಲಾಗುತ್ತಿದೆ. ಈ ಜಲಾಶಯದಿಂದ ಯಾವುದೇ ನೀರಾವರಿ ಯೋಜನೆ ಕೈಗೊಂಡಿಲ್ಲ. ಹೀಗಾಗಿ ಈ ಮೂಲದಿಂದ ನೀರು ತರುವುದರಿಂದ ಯಾವುದೇ ರೈತರಿಗೂ ಸಮಸ್ಯೆ ಆಗುವುದಿಲ್ಲ.

-ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News