ನಾಳೆಯಿಂದ ಮುಖ್ಯಮಂತ್ರಿ 'ಗ್ರಾಮ ವಾಸ್ತವ್ಯ'

Update: 2019-06-20 14:21 GMT

ಬೆಂಗಳೂರು, ಜೂ.20: ಮುಖ್ಯಮಂತ್ರಿ ಕುಮಾರಸ್ವಾಮಿಯ ಪ್ರಮುಖ ಕಾರ್ಯಕ್ರಮವಾದ ಗ್ರಾಮ ವಾಸ್ತವ್ಯವನ್ನು ನಾಳೆಯಿಂದ(ಜೂ.21) ಆರಂಭಿಸಲಿದ್ದಾರೆ.

ಗ್ರಾಮವಾಸ್ತವ್ಯದ ಹಿನ್ನೆಲೆಯಲ್ಲಿ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಗುರುವಾರ ಬೆಂಗಳೂರಿನಿಂದ ರೈಲಿನ ಮೂಲಕ ಯಾದಗಿರಿ ಪ್ರವಾಸ ಮಾಡಿದ್ದಾರೆ. ನಾಳೆ ಬೆಳಗ್ಗೆ ಯಾದಗಿರಿಯಿಂದ ಚಂಡರಕಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಅದಕ್ಕೂ ಮೊದಲು ಇದೇ ಗ್ರಾಮದಲ್ಲಿ ಸಿಎಂ ಕುಮಾರಸ್ವಾಮಿ ಬೆಳಗ್ಗೆ 10 ರಿಂದ ಸಂಜೆ 6 ರವರೆಗೂ ಜನತಾದರ್ಶನ ನಡೆಸಿ ಸಾರ್ವಜನಿಕರಿಂದ ಮನವಿ ಸ್ವೀಕರಿಸಲಿದ್ದಾರೆ. ಅಲ್ಲದೆ, ಕುಂದುಕೊರತೆಗಳನ್ನು ಆಲಿಸಲಿದ್ದಾರೆ.

ನಾಲೆಯಿಂದ ಆರಂಭ ಮಾಡಲಿರುವ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಮೂರು ದಿನಗಳ ಕಾಲ ನಡೆಯಲಿದೆ. ಉತ್ತರ ಕರ್ನಾಟಕದ ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು, ತಮ್ಮ ಮೊದಲ ಗ್ರಾಮವಾಸ್ತವ್ಯವನ್ನು ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ತಾಲೂಕಿನ ಚಂಡರಕಿ ಗ್ರಾಮದಿಂದ ಆರಂಭಿಸಲಿದ್ದಾರೆ.

ಚಂಡರಕಿ ಗ್ರಾಮದಲ್ಲಿ ರೈತರೊಂದಿಗೆ ಚರ್ಚೆ ನಡೆಸುವ ಮುಖ್ಯಮಂತ್ರಿ ಸಂಜೆ ಮಾದರಿ ಕೃಷಿ ಬೆಳೆ ಪರಿವರ್ತನೆ ಸೇರಿದಂತೆ ಹಲವು ಮಹತ್ವದ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ. ಸ್ಥಳೀಯ ಶಾಲಾ ಮಕ್ಕಳು ನಡೆಸಿಕೊಡುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಕುಮಾರಸ್ವಾಮಿ, ಶಾಲಾ ಮಕ್ಕಳು ಹಾಗೂ ಅಲ್ಲಿನ ಶಿಕ್ಷಕರೊಂದಿಗೆ ರಾತ್ರಿಯ ಭೋಜನ ಸವಿಯಲಿದ್ದಾರೆ. ಇದೇ ಗ್ರಾಮದ ಸರಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಎರಡನೆ ದಿನ ಬೆಳಗ್ಗೆ ಚಂಡರಕಿ ಗ್ರಾಮದಿಂದ ಕಲಬುರಗಿ ಜಿಲ್ಲೆಯ ಅಫ್ಜಲ್‌ಪುರ ತಾಲೂಕಿನ ಹೆರೂರ್(ಬಿ) ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಇಲ್ಲಿ ಎರಡನೆ ದಿನದ ಗ್ರಾಮ ವಾಸ್ತವ್ಯ ಮಾಡಲಿರುವ ಸಿಎಂ ಕುಮಾರಸ್ವಾಮಿ, ಇಲ್ಲಿಯೂ ದಿನಪೂರ್ತಿ ಜನತಾ ದರ್ಶನ ನಡೆಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ. ಅನಂತರ ಸಂಜೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಶಾಲಾ ಮಕ್ಕಳೊಂದಿಗೆ ಭೋಜನ ಸವಿದು, ಇಲ್ಲಿನ ಸರಕಾರಿ ಶಾಲೆಯಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ. ಜೂ.23 ರಂದು ಬೆಳಗ್ಗೆ ಕಲಬುರಗಿಗೆ ಆಗಮಿಸಲಿದ್ದು, ಅಲ್ಲಿಂದ ವಿಮಾನದ ಮೂಲಕ ನೇರವಾಗಿ ಬೆಂಗಳೂರಿಗೆ ತೆರಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News