ಜನರ ಸಮಸ್ಯೆಗಳ ಪರಿಹಾರ, ರಾಜ್ಯದ ಅಭಿವೃದ್ಧಿಗಾಗಿ ‘ಗ್ರಾಮ ವಾಸ್ತವ್ಯ’: ಸಿಎಂ ಕುಮಾರಸ್ವಾಮಿ

Update: 2019-06-20 14:25 GMT

ಬೆಂಗಳೂರು, ಜೂ. 20: ಗ್ರಾಮೀಣ ಪ್ರದೇಶದ ಜನರ ವಾಸ್ತವ ಸಮಸ್ಯೆಗಳನ್ನು ಅರಿತು, ಅವುಗಳ ಪರಿಹಾರ ಹಾಗೂ ಅಭಿವೃದ್ಧಿಗಾಗಿ ಗ್ರಾಮ ವಾಸ್ತವ್ಯ ನಡೆಸುತ್ತಿದ್ದೇನೆ ಹೊರತು, ಯಾವುದೇ ಗಿಮಿಕ್‌ಗಾಗಿ ಅಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮೈತ್ರಿ ಸರಕಾರ ಒಂದು ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿರುವ ‘ಮೈತ್ರಿ ಪರ್ವ’ ಕಿರು ಹೊತ್ತಿಗೆ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.

ಗ್ರಾಮ ವಾಸ್ತವ್ಯ ತೋರ್ಪಡಿಕೆಗಾಗಿ ಅಲ್ಲ. ಬದಲಿಗೆ ಗ್ರಾಮೀಣ ಪ್ರದೇಶದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ರಾಜ್ಯದ ಅಭಿವೃದಿಗೆ ನೆರವಾಗಲಿದೆ ಎಂದ ಕುಮಾರಸ್ವಾಮಿ, ಸ್ಥಳದಲ್ಲೆ ಕೆಲ ಸಮಸ್ಯೆಗಳನ್ನು ಪರಿಹರಿಸಲಿದ್ದೇವೆ. ಅಲ್ಲದೆ, ಹಳ್ಳಿಯ ಜನರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಲು ಗ್ರಾಮ ವಾಸ್ತವ್ಯ ಸಹಕಾರಿ ಎಂದರು.

ಬೆಳಗ್ಗೆ 10ರಿಂದ ಸಂಜೆ 6 ಗಂಟೆಯ ವರೆಗೂ ಗ್ರಾಮದ ಜನರ ಸಮಸ್ಯೆಗಳನ್ನು ಆಲಿಸಲಿದ್ದು, ಸ್ಥಳದಲ್ಲೆ ಅವುಗಳ ಪರಿಹಾರಕ್ಕೆ ಕೆಲ ತೀರ್ಮಾನ ಮಾಡಲಾಗುವುದು ಎಂದ ಅವರು, ನಿನ್ನೆ ಚನ್ನಪಟ್ಟಣದಲ್ಲಿ ಸುಮಾರು 7 ಸಾವಿರ ಅರ್ಜಿಗಳು ಬಂದಿವೆ ಎಂದು ಹೇಳಿದರು.

ಈ ಹಿಂದೆ ತಾನು ಸಿಎಂ ಆಗಿದ್ದ ವೇಳೆ ಒಟ್ಟು 43 ಗ್ರಾಮ ವಾಸ್ತವ್ಯ ಮಾಡಿದ್ದು, ಆ ವೇಳೆ ತಾನು ವಾಸ್ತವ್ಯ ಹೂಡಿದ್ದ ಬಹುತೇಕ ಗ್ರಾಮಗಳು ಅಭಿವೃದ್ಧಿ ಕಂಡಿವೆ ಎಂದ ಕುಮಾರಸ್ವಾಮಿ, ನಾನು ಪಂಚತಾರಾ ಸಂಸ್ಕೃತಿಯನ್ನೂ ನೋಡಿದ್ದೇನೆ. ಅದೇ ರೀತಿ ಗುಡಿಸಲಿನಲ್ಲಿಯೂ ಮಲಗಿದ್ದೇನೆ ಎಂದರು. ಕೆಲವರು ಮನೆಯಲ್ಲಿ ನಿದ್ದೆ ಬರುವುದಿಲ್ಲ ಎಂದು ರಸ್ತೆಯಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿ ಬೆಳಗ್ಗೆ ಚಡ್ಡಿ ಹಾಕಿಕೊಂಡು ವ್ಯಾಯಾಮ ಮಾಡುತ್ತಿದ್ದದು ಮಾಧ್ಯಮಗಳಲ್ಲಿ ನೋಡಿದೆ. ಆದರೆ, ನಾನು ಮನೆಯಲ್ಲಿ ನಿದ್ದೆ ಬರುವುದಿಲ್ಲ ಎಂದು ಗ್ರಾಮ ವಾಸ್ತವ್ಯ ಮಾಡುತ್ತಿಲ್ಲ. ಎಲ್ಲೇ ಮಲಗಿದರೂ ನನಗೆ ನಿದ್ದೆ ಬರುತ್ತದೆ ಎಂದರು.

ಅತಂತ್ರ ಫಲಿತಾಂಶ ಬಂದ ಕಾರಣಕ್ಕೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆ ಮಾಡಿದ್ದು, ಅನಿರೀಕ್ಷಿತವಾಗಿ ನಾನು ಸಿಎಂ ಆಗಿದ್ದೇನೆ. ಇದನ್ನು ಸಹಿಸಿಕೊಳ್ಳಲು ಬಿಜೆಪಿಯವರಿಗೆ ಆಗುತ್ತಿಲ್ಲ. ಸರಕಾರ ಅಸ್ಥಿರಕ್ಕೆ ನಿರಂತರ ಪ್ರಯತ್ನ ನಡೆಸುತ್ತಿದ್ದು, ಇಂದೂ ಏಳೆಂಟು ಮಂದಿ ರಾಜೀನಾಮೆ ವದಂತಿ ಹರಿದಾಡುತ್ತಿದೆ. ಆದರೆ, ಸರಕಾರ ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಸರಕಾರ ಸುಭದ್ರವಾಗಿದೆ ಎಂದರು.

ಅಭಿವೃದ್ಧಿಗೆ ಆದ್ಯತೆ: ಮೈತ್ರಿ ಸರಕಾರ ಆಡಳಿತಕ್ಕೆ ಬಂದ ಬಳಿಕ ಒಟ್ಟಾರೆ 4.5 ಲಕ್ಷ ಕೋಟಿ ರೂ.ಮೊತ್ತದ ಎರಡು ಬಜೆಟ್ ಮಂಡನೆ ಮಾಡಿದ್ದು, ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಕೃಷಿ, ನೀರಾವರಿಗೆ ಆದ್ಯತೆ ನೀಡಲಾಗಿದೆ. ರೈತರ ಸಾಲಮನ್ನಾಕ್ಕೆ ಎರಡು ವರ್ಷಗಳಲ್ಲಿ 25 ಸಾವಿರ ಕೋಟಿ ರೂ.ಗಳನ್ನು ಬಜೆಟ್‌ನಲ್ಲೆ ಒದಗಿಸಲಾಗಿದೆ ಎಂದರು.

ಭೀಕರ ಸ್ವರೂಪದ ಬರ, ನೆರೆಗೆ ಕೇಂದ್ರ ಸರಕಾರ ಸಮರ್ಪಕ ನೆರವು ನೀಡುತ್ತಿಲ್ಲ. ಅಲ್ಲದೆ, ಉದ್ಯೋಗ ಖಾತ್ರಿ ಯೋಜನೆ ಬಾಕಿ ಮೊತ್ತವನ್ನು ನೀಡಿಲ್ಲ. ಹೀಗಿರುವಾಗ ಸರಕಾರ ತನ್ನ ಸಂಪನ್ಮೂಲದಲ್ಲೆ ಸವಾಲಾಗಿ ಸ್ವೀಕರಿಸಿ ನೆರೆ ಮತ್ತು ಬರ ಪರಿಹಾರ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸಲಾಗುತ್ತಿದೆ. ಏಕಪಕ್ಷ ಅಧಿಕಾರದಲ್ಲಿದ್ದರೂ ಮಾಡಲಾಗದಷ್ಟು ಅಭಿವೃದ್ಧಿ ಕೆಲಸಗಳನ್ನು ಮೈತ್ರಿ ಸರಕಾರ ಮಾಡಿದೆ ಎಂದು ಹೇಳಿದರು.

‘ಆಪರೇಷನ್ ಕಮಲ’ ಸಂಬಂಧ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಖುದ್ದು ಮಾತನಾಡಿದ ಆಡಿಯೋ ಸಂಬಂಧ ‘ಸಿಟ್’ ತನಿಖಾ ತಂಡ ರಚಿಸಲಾಗಿದೆ. ಈ ಬಗ್ಗೆ ನಮಗೆ ಯಾವುದೇ ಆತುರ ಇಲ್ಲ. ಇದಕ್ಕೆಲ್ಲ ಕಾಲವೇ ಸೂಕ್ತ ಸಮಯದಲ್ಲಿ ಉತ್ತರ ನೀಡಲಿದೆ’

-ಎಚ್.ಡಿ.ಕಮಾರಸ್ವಾಮಿ, ಮುಖ್ಯಮಂತ್ರಿ

‘ಬರ ಅಧ್ಯಯನ ಪ್ರವಾಸ ಕೈಗೊಂಡಿರುವ ವಿಪಕ್ಷ ನಾಯಕ ಯಡಿಯೂರಪ್ಪ, ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದು, ಮಾಧ್ಯಮಗಳಲ್ಲಿ ಟೀಕೆ ಮಾಡಿದ್ದಾರೆ. ಈ ಬಗ್ಗೆ ದಾಖಲೆಗಳನ್ನು ತರಿಸಿ ಇಟ್ಟುಕೊಂಡಿದ್ದೇನೆ. ವಿಧಾನಸಭೆಯಲ್ಲಿ ಅವರ ಟೀಕೆಗಳನ್ನು ಉತ್ತರ ನೀಡುತ್ತೇನೆ. ಬಿಎಸ್‌ವೈ ಬರ ಅಧ್ಯಯನದ ಬಗ್ಗೆ ಸರಕಾರಕ್ಕೆ ಯಾವುದೇ ಮನವಿಯನ್ನೂ ಸಲ್ಲಿಸಿಲ್ಲ’

-ಎಚ್.ಡಿ.ಕಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News